ಒಡೆಯುತ್ತಿರುವ ಸಮಾಜವನ್ನು ಗಾಂಧಿ ಚಿಂತನೆ ಬೆಸೆಯಲಿ: ಪ್ರೊ.ಕಲ್ಗುಡಿ

ಬೆಂ.ವಿವಿ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಸರ್ವೋದಯ ದಿನಾಚರಣೆ
ಬೆಂಗಳೂರು,ಜ.30: ದುರ್ಬಲವೆಂಬಂತೆ ಕಾಣುವ ಅಹಿಂಸೆಯ ತತ್ವದ ಮೂಲಕ ಗಾಂಧೀಜಿಯವರು ವಸಾಹತು ಶಾಹಿಯ ಪ್ರಬಲ ಶಕ್ತಿಯನ್ನು ಮಣಿಸಿದರು. ಗಾಂಧಿ ನಮ್ಮಿಳಗೆ ನಿರಂತರ ವಾಗಿ ರೂಪುಗೊಳ್ಳಬೇಕಾದ ಆಧ್ಯಾತ್ಮಿಕ ಶಕ್ತಿಯಾಗಿದ್ದಾರೆ. ಇಂದುಒಡೆದು ಹೋಗುತ್ತಿರುವ ಸಮಾಜವನ್ನು ಬೆಸೆಯಬಲ್ಲ ಶಕ್ತಿ ಗಾಂಧಿ ಚಿಂತನೆಗಳಿಗಿದೆ. ಅವುಗಳನ್ನು ಬಳಸಿ ಸಮುದಾಯಗಳನ್ನು ಒಳಗೊಳ್ಳುವ ಕೆಲಸವನ್ನು ನಾವು ಇಂದು ಮಾಡಬೇಕಾಗಿದೆ ಎಂದು ಚಿಂತಕ ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಏರ್ಪಡಿಸಿದ್ದ ಸರ್ವೋದಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧೀಜಿಯವರು ಸತ್ಯವನ್ನು ನೋಡಬೇಕಾದ ಹೊಸ ರೀತಿಯನ್ನು ಪಶ್ಚಿಮಕ್ಕೂ, ಪೂರ್ವಕ್ಕೂ ಏಕಕಾಲಕ್ಕೆ ತೋರಿಸಿಕೊಟ್ಟರು ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಬಿ.ತಿಮ್ಮೇಗೌಡ ಅವರು ಮಾತನಾಡಿ, ಬ್ರಿಟಿಷರ ಗುಲಾಮಗಿರಿ ಯನ್ನು ಅನುಭವಿಸಿದ ಹಳೆಯ ತಲೆಮಾರಿಗೆ ಸ್ವಾತಂತ್ರ್ಯದ ಮಹತ್ವ ಹಾಗೂ ಅರ್ಥ ಚೆನ್ನಾಗಿ ತಿಳಿದಿತ್ತು. ಆದರೆ, ಗಾಂಧೀಜಿ ಯವರಂಥ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳ ಫಲವನ್ನು ಅನುಭವಿಸುತ್ತಿರುವ ಈಚಿನ ತಲೆಮಾರುಗಳು ಅದರ ಮಹತ್ವವನ್ನು ಸರಿಯಾಗಿ ಮನಗಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಗಾಂಧೀಜಿಯವರ ಹಲವು ಹೇಳಿಕೆಗಳನ್ನು ಈ ಕಾಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿದ ಅವರುಗಾಂಧೀ ಚಿಂತನೆಗಳ ಆಧಾರದ ಮೇಲೆ ಜಾತ್ಯತೀತ, ಸಮಾಜವಾದಿ ರಾಷ್ಟ್ರವನ್ನು ಇಂದು ಕಟ್ಟಬೇಕಾಗಿದೆ ಎಂದರು.
ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ನಟ ರಾಜ್ ಹುಳಿಯಾರ್ ಮಾತನಾಡಿ, ಗಂಡು ಮತ್ತು ಹೆಣ್ಣು ಈ ಎರಡೂ ವ್ಯಕ್ತಿತ್ವಗಳನ್ನು ಬೆಸೆದು, ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ರೀತಿ ಯನ್ನು ಗಾಂಧಿ ತೋರಿಸಿದ್ದರು. ಒಂದು ರೀತಿಯಲ್ಲಿ ಸಾವನ್ನು ಮೊದಲೇ ನಿರೀಕ್ಷಿಸಿದ್ದ ಗಾಂಧೀಜಿ ನಾನು ಗೋರಿಯಿಂದಲೂ ಮಾತನಾಡುತ್ತಿರುತ್ತೇನೆ ಎಂದದ್ದು ಇಂದು ನಿಜವಾಗಿದೆ. ಗಾಂಧೀ ಚಿಂತನೆಯಿಂದ ಸಾಧಾರಣ ವ್ಯಕ್ತಿಗಳು, ನೂರಾರು ಸಮುದಾಯಗಳು ಸದಾ ಸ್ಫೂರ್ತಿ ಪಡೆಯುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಬದುಕು, ಚಿಂತನೆ ಕುರಿತ ’ಗಾಂಧೀ ಕ್ವಿಝ್’ ಏರ್ಪಡಿಸಲಾಗಿತ್ತು. ಅರ್ಥ ಶಾಸ್ತ್ರಜ್ಞ ಪ್ರೊ.ಎಸ್.ಆರ್.ಕೇಶವ್ ಕ್ವಿಝ್ ಕಾರ್ಯಕ್ರಮ ನಿರ್ವ ಹಿಸಿದರು. ಸಂಭ್ರಮ್ ಕಾಲೇಜು (ಪ್ರಥಮ), ಶೇಷಾದ್ರಿಪುರಂ ಕಾಲೇಜು (ದ್ವಿತೀಯ), ಕನ್ನಡ ಅಧ್ಯಯನ ಕೇಂದ್ರ (ತೃತೀಯ)ದ ವಿದ್ಯಾರ್ಥಿಗಳು ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಪ್ರೊ. ಗೋಪಾಲಕೃಷ್ಣ , ಚಂದ್ರಶೇಖರ ಐಜೂರ್ ಉಪಸ್ಥಿತರಿದ್ದರು.
ಬ್ರಿಟಿಷರ ಗುಲಾಮಗಿರಿಯನ್ನು ಅನುಭವಿಸಿದ ಹಳೆಯ ತಲೆಮಾರಿಗೆ ಸ್ವಾತಂತ್ರ್ಯದ ಮಹತ್ವ ಹಾಗೂ ಅರ್ಥ ಚೆನ್ನಾಗಿ ತಿಳಿದಿತ್ತು. ಆದರೆ, ಗಾಂಧೀಜಿಯವರಂಥ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳ ಫಲವನ್ನು ಅನುಭವಿಸುತ್ತಿರುವ ಈಚಿನ ತಲೆಮಾರುಗಳು ಅದರ ಮಹತ್ವವನ್ನು ಸರಿಯಾಗಿ ಮನಗಂಡಿಲ್ಲ
-ಪ್ರೊ.ಬಿ.ತಿಮ್ಮೇಗೌಡ, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ





