ಎರಡು ಪಾರಂಪರಿಕ ಕಟ್ಟಡಗಳು ಸಾಲದ ಸುಳಿಯಿಂದ ಮುಕ್ತ: ಸಚಿವ ಜಾರ್ಜ್

ಬೆಂಗಳೂರು, ಜ. 30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಾಲಕ್ಕಾಗಿ ಅಡವಿಟ್ಟಿದ್ದ 11 ಆಸ್ತಿಗಳ ಪೈಕಿ ಎರಡು ಆಸ್ತಿಗಳನ್ನು ಬಿಡಿಸಿಕೊಳ್ಳಲಾಗಿದೆ. ಪ್ರತಿಷ್ಠಿತ ಕಟ್ಟಡಗಳಾದ ಮೆಯೋ ಹಾಲ್, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಸಾಲದ ಸುಳಿಯಿಂದ ಮುಕ್ತವಾಗಿವೆ ಎಂದು ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಕಾಲದಲ್ಲಿ ಬಡ್ಡಿ ಮತ್ತು ಅಸಲಿನ ಮೊತ್ತ ಪಾವತಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಅಡವಿಟ್ಟಿದ್ದ ಪಾರಂಪರಿಕ ಕಟ್ಟಡಗಳನ್ನು ಹುಡ್ಕೊ ಸಂಸ್ಥೆ ಹಿಂದಿರುಗಿಸಿದೆ ಎಂದು ಹೇಳಿದರು.
2011-12 ಹಾಗೂ 2012-13ರಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಬಿಬಿಎಂಪಿಯ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್ ಮಾರುಕಟ್ಟೆ, ಮೆಯೋಹಾಲ್ ಕೋರ್ಟ್, ಕೆಂಪೇಗೌಡ ವಸ್ತು ಸಂಗ್ರಹಾಲಯ, ಪಶ್ಚಿಮ ವಲಯ ಕಚೇರಿ, ಕಲಾಸಿಪಾಳ್ಯ ಮಾರುಕಟ್ಟೆ ಸೇರಿದಂತೆ ವಿವಿಧ ಆಸ್ತಿಗಳನ್ನು ಅಡವಿರಿಸಲಾಗಿತ್ತು ಎಂದು ಹೇಳಿದರು.
ಇದೇ ವೇಳೆ ಬಿಬಿಎಂಪಿ ಮೇಯರ್ ಮಂಜುನಾಥರೆಡ್ಡಿ ಮಾತನಾಡಿ, ಬಿಬಿಎಂಪಿ ನಗರದ ವಿವಿಧ ಬ್ಯಾಂಕ್‌ಗಳಿಂದ 1,800 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲ ಮಾಡಿದೆ. ಪ್ರತಿದಿನ 20 ಲಕ್ಷ ರೂ.ಬಡ್ಡಿ ಪಾವತಿಸಬೇಕಿದೆ. ಇದರಿಂದ ಮುಕ್ತಿ ಕೊಡಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಬಿಬಿಎಂಪಿಗೆ ರಾಜ್ಯ ಸರಕಾರ ಸ್ಪಂದಿಸಿದೆ ಎಂದು ಹೇಳಿದರು.





