ಕೋಮು ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಕಾಂಗ್ರೆಸ್ ವಿಫಲ: ಎ.ಕೆ.ಸುಬ್ಬಯ್ಯ

ಮಂಗಳೂರು, ಜ.30: ಕೋಮುಶಕ್ತಿಯನ್ನು ಹಿಮ್ಮೆಟ್ಟಿಸು ವಲ್ಲಿ ಪ್ರಬಲ ರಾಜಕೀಯ ಪಕ್ಷವಾದ ಕಾಂಗ್ರೆಸ್ ವೈಫಲ್ಯ ಕಂಡಿರುವುದರಿಂದಲೇ ಇಂದು ಸಮಾಜದಲ್ಲಿ ಸಹಬಾಳ್ವೆಗೆ ತೊಂದರೆಯಾಗಿದೆ ಎಂದು ಹಿರಿಯ ವಿಚಾರವಾದಿ ಎ.ಕೆ. ಸುಬ್ಬಯ್ಯ ಅಭಿಪ್ರಾಯಿಸಿದ್ದಾರೆ.
ಪುರಭವನದಲ್ಲಿ ಇಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ಆಯೋಜಿಸಲಾದ ‘ಸಹಬಾಳ್ವೆ ಸಾಗರ’ ರಾಷ್ಟ್ರೀಯ ಸಮಾವೇಶದ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಕುರಿತಾದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಗವದ್ಗೀತೆಯಲ್ಲಿ ಹೇಳಿದ ದೈವೀ ಗುಣ ಇರುವ ಮಹಾತ್ಮಾ ಗಾಂಧೀಜಿಯವರನ್ನು ಭಗವದ್ಗೀತೆಯ ರಾಕ್ಷಸಿ ಗುಣ ಇರುವ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ. ಅದೇ ರಾಕ್ಷಸಿ ಗುಣದವರು ಬಾಬರಿ ಮಸೀದಿಯನ್ನು ಧ್ವಂಸಗೈದರು. ಇದೀಗ ಅದೇ ರಾಕ್ಷಸಿ ಗುಣ ಇರುವವರು ಭಗವದ್ಗೀತೆಯನ್ನು ಶಾಲೆಗಳಲ್ಲಿ ಪಠ್ಯವಾಗಿಸಬೇಕೆಂದು ಹಠ ಮಾಡುತ್ತಿದ್ದರೆ, ದೈವೀ ಗುಣವಿರುವ ಜಾತ್ಯತೀತ ನಿಲುವಿನವರು ಅದನ್ನು ಬೇಡ ಎನ್ನುತ್ತಿದ್ದಾರೆ ಎಂದವರು ಮಾರ್ಮಿಕವಾಗಿ ನುಡಿದರು.
ಕೇರಳದಲ್ಲಿ ‘ಹೇಟ್ ಮುಸ್ಲಿಮ್ ಅಭಿಯಾನ’ದ ವೇಳೆ ಎಡಪಂಥೀಯರು ರಸ್ತೆಗಿಳಿದರು. ಹಾಗಾಗಿ ಅಲ್ಲಿ ಹಿಂದೂ-ಮುಸ್ಲಿಮರ ನಡುವಿನ ಗಲಾಟೆ ಎಂಬುದು ಬಹಳ ಅಪರೂಪ. ಅಲ್ಲಿ ಏನಿದ್ದರೂ ಕಮ್ಯುನಿಸ್ಟರು ಮತ್ತು ಕೋಮುವಾದಿಗಳ ನಡುವಿನ ಸಂಘರ್ಷಗಳು ರೂಪುಗೊಳ್ಳುತ್ತಿವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಇಂತಹ ಸಮಾವೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸುವ ಮೂಲಕ ಕೋಮುಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದವರು ಹೇಳಿದರು.
ಕೋಮುಶಕ್ತಿಗಳಿಗೆ ರಾಜಾಶ್ರಯವಿಲ್ಲದೆ ಅದು ಅಪಾಯಕಾರಿಯಾಗುವುದಿಲ್ಲ. ರಾಜಾಶ್ರಯ ದೊರಕಿದಾಕ್ಷಣ ಅವು ಅಪಾಯಕಾರಿಯಾಗುತ್ತವೆ. ಮುಂದಿನ ಚುನಾವಣೆಯಲ್ಲಿ ರಾಷ್ಟ್ರ ಮತ್ತು ರಾಜ್ಯದಲ್ಲಿ ಕೋಮುಶಕ್ತಿಯನ್ನು ದೂರ ಉಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಬೇಕಾಗಿದೆೆ ಎಂದು ಅವರು ಹೇಳಿದರು. ಗೋಷ್ಠಿಯನ್ನು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಜಾತ್ಯತೀತ ಎಂಬುದು ಉಸಿರಿನಂತೆ, ಭಾರತ ದೇಶ ಬದುಕಲು ಜಾತ್ಯತೀತ ವ್ಯವಸ್ಥೆ ಅತೀ ಅಗತ್ಯ. ದೇಶಪ್ರೇಮ ಇರುವವರು ಕೋಮುವಾದಕ್ಕೆ ಅವಕಾಶ ನೀಡಬಾರದು ಎಂದರು. ಸಿಪಿಐನ ಪಿ.ವಿ. ಲೋಕೇಶ್, ಸಿಪಿಎಂನ ಜಿ.ಎನ್. ನಾಗರಾಜ್, ಸಮಾಜ ಪರಿವರ್ತನಾ ಚಳವಳಿಯ ಡೀಕಯ್ಯ, ಮಹಿಳಾ ಪರ ಸಂಘಟನೆಯ ಪರವಾಗಿ ಜ್ಯೋತಿ ಚೇಳ್ಯಾರು, ಸಮಾನತೆಗಾಗಿ ಜನಾಂದೋಲನ ಸಿರಿಮನೆ ನಾಗರಾಜ್, ಕರ್ನಾಟಕ ಮಿಷನ್ ನೆಟ್‌ವರ್ಕ್ ವಾಲ್ಟರ್ ಮಾಬೆನ್, ಜಮಾಅತೆ ಇಸ್ಲಾಮಿ ಹಿಂದ್‌ನ ಸಯೀದ್ ಇಸ್ಮಾಯೀಲ್, ಕರ್ನಾಟಕ ರಾಜ್ಯ ರೈತ ಸಂಘ ಜೆ.ಎಂ. ವೀರಸಂಗಯ್ಯ, ಸ್ವರಾಜ್ ಅಭಿಯಾನದ ಡೊಡ್ಡಿಪಾಳ್ಯ ನರಸಿಂಹಮೂರ್ತಿ ಮೊದಲಾದವರು ಮಾತನಾಡಿ ಅನಿಸಿಕೆ ವ್ಯಕ್ತಪಡಿಸಿದರು. ಕರ್ನಾಟಕ ಕೋಮ ಸೌಹಾರ್ದ ವೇದಿಕೆಯ ಬೆಂಗಳೂರು ಅಧಯಕ್ಷ ಅಮ್ಜದ್ ಪಾಷ ಸ್ವಾಗತಿಸಿದರು. ಸಹಮತದ ಶಶಿಧರ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಇಸ್ಮತ್ ಪಜೀರ್ ಪರಿಚಯ ನೀಡಿದರು.
ಗುಜರಾತ್‌ನಲ್ಲಿ ಕಾಂಗ್ರೆಸ್ ವೈಫಲ್ಯದಿಂದ ಸಹಬಾಳ್ವೆ ನಿರ್ನಾಮ
ಗುಜರಾತ್ ಹತ್ಯಾಕಾಂಡದ ವೇಳೆ ಪ್ರಬಲ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಕೋಮುವಾದಿಗಳ ವಿರುದ್ಧ ಸೆಟೆದು ನಿಂತಿದ್ದರೆ ಕೋಮುವಾದಿ ಶಕ್ತಿಗಳು ಪ್ರಬಲವಾಗಲು ಸಾಧ್ಯವಾಗುತ್ತಿರಲಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್‌ನ ವೈಫಲ್ಯ ಸಹಬಾಳ್ವೆ ಸಮಾಜ ನಿರ್ನಾಮಕ್ಕೆ ಕಾರಣವಾಯಿತು ಎಂದು ಎ.ಕೆ. ಸುಬ್ಬಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷವನ್ನು ತನ್ನ ತೀಕ್ಷ್ಣವಾದ ಮಾತುಗಳಿಂದ ತರಾಟೆಗೈದರು.







