ಸಿರಿಯ: ಹಸಿವೆಯಿಂದ ಇನ್ನೂ 16 ಸಾವು: ಒಟ್ಟು ಸಂಖ್ಯೆ 46ಕ್ಕೆ: ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’
ಬೆರೂತ್ (ಲೆಬನಾನ್), ಜ. 30: ಸಿರಿಯದ ಮುತ್ತಿಗೆಗೊಳಗಾದ ಪಟ್ಟಣ ಮಡಾಯದಲ್ಲಿ, ಈ ತಿಂಗಳ ಆದಿ ಭಾಗದಲ್ಲಿ ನೆರವು ತಂಡಗಳು ಅಲ್ಲಿಗೆ ಪ್ರವೇಶಿಸಿದಂದಿನಿಂದ ಇನ್ನೂ ಕನಿಷ್ಠ 16 ಮಂದಿ ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ.
ಪಟ್ಟಣದ ಇನ್ನೂ ನೂರಾರು ನಿವಾಸಿಗಳು ತೀವ್ರ ಅಪೌಷ್ಟಿಕತೆಯಿಂದಾಗಿ ಸಾವಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಮಾನವೀಯ ನೆರವು ಗುಂಪು ಎಚ್ಚರಿಸಿದೆ.
ಇದರೊಂದಿಗೆ, ಮಡಯಾ ಪಟ್ಟಣದಲ್ಲಿ ಡಿಸೆಂಬರ್‌ನಿಂದೀಚೆಗೆ ಹಸಿವೆಯಿಂದ ಸತ್ತವರ ಸಂಖ್ಯೆ 46ಕ್ಕೆ ಏರಿದೆ ಎಂದು ಅದು ಹೇಳಿದೆ.
ಆದರೆ, ಹಸಿವಿನಿಂದ ಮೃತಪಟ್ಟವರ ನೈಜ ಸಂಖ್ಯೆ ಹಲವು ಪಟ್ಟು ಅಧಿಕವಾಗಿರುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಸಿದೆ.
‘‘ಡಿಸೆಂಬರ್ 1ರ ಬಳಿಕ ಹಸಿವಿನಿಂದ ಸಂಭವಿಸಿದ 46 ಪ್ರಕರಣಗಳ ಸ್ಪಷ್ಟ ದಾಖಲೆ ಇದೆ’’ ಎಂದು ಹೇಳಿಕೆಯೊಂದರಲ್ಲಿ ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ.
‘‘ಆದರೆ, ಹಸಿವೆಯಿಂದ ಸತ್ತವರ ನೈಜ ಸಂಖ್ಯೆ ತುಂಬಾ ಅಧಿಕವಾಗಿದೆ. ಜನರು ತಮ್ಮ ಮನೆಗಳಲ್ಲೇ ಹಸಿವೆಯಿಂದ ಪ್ರಾಣ ಬಿಟ್ಟಿರುವ ವಿಷಯ ತಿಳಿದಿದೆ’’ ಎಂದಿದೆ.
ಡಮಾಸ್ಕಸ್ ರಾಜ್ಯದಲ್ಲಿರುವ ಮಡಾಯ ಪಟ್ಟಣ ಸುದೀರ್ಘ ಅವಧಿಯಲ್ಲಿ ಸರಕಾರದ ಮುತ್ತಿಗೆಗೆ ಒಳಗಾಗಿತ್ತು. ಮಡಾಯ ಪಟ್ಟಣದಲ್ಲಿ ಜನರು ಹಸಿವೆಯಿಂದ ಸತ್ತಿರುವ ವರದಿಗಳೇ ಸಿರಿಯ ಸಂಘರ್ಷ ಕುರಿತ ಹೊಸ ಶಾಂತಿ ಮಾತುಕತೆಗಳಿಗೆ ವೇದಿಕೆ ಸೃಷ್ಟಿಸಿರುವುದನ್ನು ಸ್ಮರಿಸಬಹುದಾಗಿದೆ. ತುಂಬಾ ವಿಳಂಬದ ಬಳಿಕ ಸಿರಿಯ ಶಾಂತಿ ಮಾತುಕತೆಗಳು ಶುಕ್ರವಾರ ಆರಂಭಗೊಂಡಿವೆ.
ನೂತನ ಸುತ್ತಿನ ಮಾತುಕತೆಗಳು ಆರಂಭಗೊಳ್ಳುವ ಮುನ್ನ, ದೇಶದೊಳಗಿನ ಮುತ್ತಿಗೆಗಳನ್ನು ಕೊನೆಗೊಳಿಸಬೇಕೆಂದು ಕರೆ ನೀಡುವ ವಿಶಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯಗಳನ್ನು ಜಾರಿಗೊಳಿಸಬೇಕು ಎಂದು ಸಿರಿಯದ ಪ್ರತಿಪಕ್ಷ ಒತ್ತಾಯಿಸುತ್ತಿದೆ.
ಪಟ್ಟಣದ ಸುತ್ತ ನೆಲಬಾಂಬ್‌ಗಳು
ಮುತ್ತಿಗೆಗೊಳಗಾಗಿರುವ ನಾಲ್ಕು ಪಟ್ಟಣಗಳಲ್ಲಿನ ಯುದ್ಧವನ್ನು ಕೊನೆಗೊಳಿಸಬೇಕು ಹಾಗೂ ಮಾನವೀಯ ನೆರವು ತಂಡಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಅಂಶಗಳನ್ನೊಳಗೊಂಡ ಅಪರೂಪದ ಒಪ್ಪಂದವೊಂದಕ್ಕೆ ಕಳೆದ ವರ್ಷ ಸಹಿ ಹಾಕಲಾಗಿತ್ತು. ಆ ಪಟ್ಟಣಗಳೆಂದರೆ, ಮಡಾಯ, ಬಂಡುಕೋರರ ನಿಯಂತ್ರಣದಲ್ಲಿರುವ ಝಬಾದನಿ ಹಾಗೂ ಸರಕಾರದ ನಿಯಂತ್ರಣದಲ್ಲಿರುವ ಫುವಾ ಮತ್ತು ಕಫ್ರಯ. ಇವುಗಳ ಪೈಕಿ ಮಡಾಯದ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಅಲ್ಲಿ ವಾಸಿಸುತ್ತಿರುವ 42,000 ನಾಗರಿಕರನ್ನು ಸರಕಾರಿ ಪಡೆಗಳು ಸುತ್ತುವರಿದಿವೆ. ಜನರು ಹೊರಗೆ ಹೋಗುವುದನ್ನು ತಡೆಯಲು ಸೈನಿಕರು ಪಟ್ಟಣದ ಸುತ್ತಲೂ ನೆಲಬಾಂಬ್‌ಗಳನ್ನು ಹುದುಗಿಸಿ ಇಟ್ಟಿದ್ದಾರೆ.







