ಐಎಸ್‌ಐ ಸೇರುವಂತೆ ಬಿಹಾರ ವಿದ್ಯಾರ್ಥಿಗೆ ಪಾಕ್‌ನಿಂದ ಕರೆ!
ಭಾಬುವಾ,ಜ.30: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ಸೇರ್ಪಡೆಗೊಳ್ಳುವಂತೆ ತನಗೆ ದೂರವಾಣಿ ಕರೆಯೊಂದು ಬಂದಿರುವುದಾಗಿ ಅಸ್ಸಾಂನ ವಿದ್ಯಾರ್ಥಿಯೊಬ್ಬ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾನೆ.
ಐಎಸ್‌ಐಗೆ ಸೇರುವಂತೆ ಶುಕ್ರವಾರ ತನ್ನ ಮೊಬೈಲ್‌ಗೆ ಕರೆ ಬಂದಿರುವುದಾಗಿ ಮುಖೇಶ್ ಕುಮಾರ್ ಎಂಬಾತ ಕೈಮೂರ್ ಜಿಲ್ಲೆಯ ಭಾಬುವಾ ಪೊಲೀಸ್‌ಠಾಣೆಗೆ ದೂರು ನೀಡಿರುವುದಾಗಿ ಪೊಲೀಸ್ ಅಧೀಕ್ಷಕಿ ಹರ್‌ಪ್ರೀತ್ ಕೌರ್ ತಿಳಿಸಿದ್ದಾರೆ.
12ನೆ ತರಗತಿಯಲ್ಲಿ ಕಲಿಯುತ್ತಿರುವ ಮುಖೇಶ್, ಸ್ಥಳೀಯ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿಯೂ ದುಡಿಯುತ್ತಿದ್ದಾನೆ. ಐಎಸ್‌ಐಗೆ ಸೇರುವಂತೆ ಕೇಳಿ ತನಗೆ ಎರಡು ಬಾರಿ ದೂರವಾಣಿ ಕರೆಗಳು ಬಂದಿದ್ದು, ಮೊದಲನೆಯ ಸಲ ತಾನು ಉತ್ತರಿಸಲಿಲ್ಲ. ಆದರೆ ಎರಡನೆ ಬಾರಿ ದೂರವಾಣಿ ಕರೆ ಬಂದಾಗ ಪ್ರತಿಕ್ರಿಯಿಸಿದ್ದೆ. ಆಗ ಕರೆ ಮಾಡಿದಾತನು ತಾನು ಐಎಸ್‌ಐ ಸೇರಿದಲ್ಲಿ ಕೈತುಂಬಾ ಹಣ ನೀಡುವುದಾಗಿ ಆಮಿಷವೊಡ್ಡಿದ್ದ. ತಾನು ಈ ಕೊಡುಗೆಯನ್ನು ತಿರಸ್ಕರಿಸಿದ್ದಾಗಿ ಮುಖೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಘಟನೆಗೆ ಸಂಬಂಧಿಸಿ ಪಾಟ್ನಾದಲ್ಲಿರುವ ಬಿಹಾರ ಪೊಲೀಸ್ ಕಾರ್ಯಾಲಯ, ಕೇಂದ್ರ ಗುಪ್ತಚರದಳ ಮತ್ತಿತರ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿರುವುದಾಗಿ ಎಸ್‌ಪಿ ಹರ್‌ಪ್ರೀತ್ ಕೌರ್ ತಿಳಿಸಿದ್ದಾರೆ.





