ಅಸ್ಪಶ್ಯತೆ ವಿರುದ್ಧವೂ ಹೋರಾಟ ಅಗತ್ಯ: ಮಟ್ಟು

ಮಂಗಳೂರು, ಜ.30: ಕೋಮು ಸೌಹಾರ್ದದ ಹೋರಾಟದಲ್ಲಿ ತಾರ್ಕಿಕ ಯಶಸ್ಸು ಕಾಣಬೇಕಾದರೆ ಜಾತೀ ಯತೆ, ಅಸ್ಪಶ್ಯತೆ, ಲಿಂಗತಾರತಮ್ಯ, ಭ್ರಷ್ಟಾಚಾರ, ಬಂಡವಾಳಶಾಹಿ, ಉಳಿಗಮಾನದ ವಿರುದ್ಧವೂ ಹೋರಾಟ ನಡೆಯಬೇಕಿದೆ ಎಂದು ಮುಖ್ಯ ಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ಶನಿವಾರ ಪುರಭವನದಲ್ಲಿ ಆಯೋಜಿಸಲಾದ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ‘ರಾಜಕೀಯ ಪಕ್ಷಗಳ ಪಾತ್ರ’ ಕುರಿತಾದ ಗೋಷ್ಠಿ ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಮ್ಮಿಳಗಿನ ಶತ್ರುವನ್ನು ಗುರುತಿಸುವಲ್ಲಿ ನಾವು ವಿಫಲವಾಗಿದ್ದೇವೆ. ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗಳು ಸಂಭವಿಸಿದ ವೇಳೆ ಶೂದ್ರ ವರ್ಗದವರು ಜೈಲು ಪಾಲಾಗುತ್ತಾರೆ. ಧರ್ಮದ ಹೆಸರಿನಲ್ಲಿ ಶೂದ್ರ ವರ್ಗದ ದುರ್ಬಳಕೆ ಆಗುತ್ತಿರುವ ಬಗ್ಗೆ ಎಚ್ಚರಿಕೆ ಮೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದವರು ವಿಷಾದಿಸಿದರು. ರೋಹಿತ್ ವೇಮುಲಾ ಪ್ರಕರಣ ವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮೀಸಲಾತಿಯನ್ನು ಕೈಬಿಟ್ಟಿ ದ್ದರೂ ಜಾತಿ ಆತನ ಬೆನ್ನು ಬಿಡಲಿಲ್ಲ. ಆ ಕಾರಣ ದಿಂದಾಗಿಯೇ ಆತ ಆತ್ಮಹತ್ಯೆಗೆ ಶರಣಾದ. ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಶೋಷಣೆ ಮಾಡುವವರ ಬಣ್ಣ ಬಯಲು ಮಾಡ ಬೇಕು. ಮಂಗಳೂರಿನಲ್ಲಿ ಹಿಂದೂ ಕೋಮು ವಾದಕ್ಕೆ ಪ್ರಬಲ ಪೈಪೋಟಿ ನೀಡುವಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳಿಂದ ಅದೇ ರೀತಿಯಲ್ಲಿ ಮುಸ್ಲಿಮ್ ಕೋಮುವಾದವನ್ನು ಹರಡಲಾಗುತ್ತಿದೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.





