ಕುಂದಾಪುರ: ‘ಬ್ಯಾರೀಸ್’ ವಾರ್ಷಿಕೋತ್ಸವ

ಕುಂದಾಪುರ, ಜ.30: ಇಲ್ಲಿನ ಕೋಡಿಯಲ್ಲಿ 1906ರಲ್ಲಿ ಶಿಕ್ಷಣದ ಅಭಿಯಾನ ಆರಂಭಿಸುವ ಮೂಲಕ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಇಂದಿಗೆ 110 ವರ್ಷ ಸಂದ ಹಿನ್ನೆಲೆಯಲ್ಲಿ ಸಂಸ್ಥೆಯ ವಾರ್ಷಿಕ ದಿನಾಚರಣೆಯ ಸಮಾರಂಭವನ್ನು ಶನಿವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಸಮಾಜ ಸೇವೆಗೆ ಬದ್ಧತೆ ಮುಖ್ಯ. ಈ ನಿಟ್ಟಿನಲ್ಲಿ ಆರಂಭಗೊಂಡ ಈ ಸಂಸ್ಥೆಯು ಇತರರಿಗೆ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿ ಸೈಯದ್ ಮುಹಮ್ಮದ್ ಬ್ಯಾರಿ, ಶಿಕ್ಷಣ ಎನ್ನುವುದು ಶಿಶು ಕೇಂದ್ರಿತವಾಗಿರಬೇಕು. ಮೌಲ್ಯಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳುವುದಕ್ಕೆ ಶಿಕ್ಷಣ ಒತ್ತು ನೀಡುತ್ತದೆ ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಾಪುರ ವಲಯ ಸಹಾಯಕ ಕಮಿಷನರ್, ಉದ್ಯಮಿ ಆನಂದ ಸಿ. ಕುಂದರ್ ಮಾತನಾಡಿದರು. ಈ ಸಂದರ್ಭ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಆನಂದ ಸಿ.ಕುಂದರ್‌ರವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಗಳ ಮುಖ್ಯಸ್ಥರಾದ ಮಾಲತಿ, ಶಮೀರ್, ರೆಹನಾ ಬೇಗಂ, ಸುಮಿತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿರ್‌ದೌಸ್ ಹಾಗೂ ಜಯಂತಿ ವಾರ್ಷಿಕ ವರದಿಯನ್ನು ವಾಚಿಸಿದರು. ಸುರೇಂದ್ರ ಶೆಟ್ಟಿ ಹಾಗೂ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಮುಖ್ಯ ಶಿಕ್ಷಕ ರವೀಂದ್ರ ಸ್ವಾಗತಿಸಿದರು. ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪಕೆ.ಎಸ್. ವಂದಿಸಿದರು.







