ಗದ್ದಲದಿಂದ ಎಂಡೋಸಲ್ಫಾನ್ ಸಭೆ ಮೊಟಕು!
ಕಾಸರಗೋಡು, ಜ. 30: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಪಿ. ಮೋಹನನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್ ಸೆಲ್ ಸಭೆ ಗದ್ದಲದಲ್ಲಿ ಅಂತ್ಯಗೊಂಡಿತು. ಹೋರಾಟ ಸಮಿತಿಯ ಪ್ರತಿಭಟನೆ, ಪ್ರತಿಪಕ್ಷ ಶಾಸಕರು, ಸಂಸದರ ಬಹಿಷ್ಕಾರದಿಂದ ಸಭೆ ಅರ್ಧದಲ್ಲೇ ಮೊಟಕುಗೊಂಡಿತು. ಸಂತ್ರಸ್ತರು ತಿರುವನಂತಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಸಮಸ್ಯೆ ಪರಿಹರಿಸಿದ ಬಳಿಕ ಸಭೆ ನಡೆಯಲಿ ಎಂದು ಪ್ರತಿಪಕ್ಷ ಶಾಸಕರು, ಜನಪ್ರತಿನಿಧಿಗಳು ಒತ್ತಾಯಿಸಿದರು.
ಪ್ರತಿಪಕ್ಷ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಸಚಿವರು ಸಭೆಯನ್ನು ಮುಂದುವರಿಸಿದಾಗ ಕೆರಳಿದ ಜನಪ್ರತಿನಿಧಿಗಳು ಸಚಿವರ ಬಳಿಗೆ ತೆರಳಿ ಪ್ರತಿಭಟನೆ ನಡೆಸಿದರು. ಸಭೆಯು ಕೇವಲ ಪ್ರಹಸನವಾಗುತ್ತಿದ್ದು, ಸಭೆಯಲ್ಲಿ ತೆಗೆದುಕೊಳ್ಳುವ ಯಾವುದೇ ತೀರ್ಮಾನಗಳು ಜಾರಿಗೊಳ್ಳುತ್ತಿಲ್ಲ ಎಂದು ಕಾಞಂಗಾಡ್ ಶಾಸಕ ಇ. ಚಂದ್ರಶೇಖರನ್ ಆರೋಪಿಸಿ ಸಭೆ ಬಹಿಷ್ಕರಿಸಿದರು. ಈ ಸಂದರ್ಭ ಶಾಸಕರ ಹೇಳಿಕೆ ಉಳಿದವರನ್ನು ಕೆರಳಿಸಿತ್ತು. ಸಂಸದ ಪಿ. ಕರುಣಾಕರನ್, ಶಾಸಕ ಕೆ. ಕುಂಞಿರಾಮನ್, ಜಿಪಂ ಸದಸ್ಯ ವಿ.ಪಿ.ಪಿ. ಮುಸ್ತಾಫ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್ ಹಾಗೂ ಹೋರಾಟ ಸಮಿತಿಯ ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಪಕ್ಷದ ಪ್ರತಿನಿಧಿಗಳಿಗೆ ಪ್ರತಿರೋಧ ಒಡ್ಡಲು ಆಡಳಿತ ಪಕ್ಷದ ಸದಸ್ಯರು ಮುಂದಾದರೂ ಸಭೆ ಗದ್ದಲದಲ್ಲೆ ಮುಂದುವರಿಯಿತು. ಈ ನಡುವೆ ಸಭಾಂಗಣದ ಹೊರಗಡೆ ಇದ್ದ ಸಂತ್ರಸ್ತರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಪರಿಣಾಮ ಸಭೆ ಗೊಂದಲದ ಗೂಡಾಯಿತು. ಹಾಗಾಗಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.







