ಪಾವಗಡದಲ್ಲಿ ಸೌರವಿದ್ಯುತ್ ಪಾರ್ಕ್: ಸಚಿವ ಡಿಕೆಶಿ
ಕಿನ್ನಿಗೋಳಿ, ಜ.30: ರಾಜ್ಯದಲ್ಲಿ ಮೊದಲ ಬಾರಿಗೆ ಪಾವಗಡದಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಸೌರ ವಿದ್ಯುತ್ ಪಾರ್ಕ್ ನಿರ್ಮಿಸಲಾಗುವುದು. ಇದು ವಿಶ್ವ ಮಾನ್ಯತೆ ಪಡೆಯಲಿದೆ. ಇಂತಹ ಯೋಜನೆಯಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಮುಲ್ಕಿ ಕರ್ನಿರೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ವಿದ್ಯುತ್ ಕೊರತೆಯಾಗದಂತೆ ಬೇರೆ ರಾಜ್ಯದಿಂದ ವಿದ್ಯುತ್ ಖರೀದಿ ಮಾಡಲಾಗುವುದು. ಬರಗಾಲ ಇದ್ದರೂ ವಿದ್ಯುತ್ ಕೊರತೆ ಇಲ್ಲ. ಶಾಲಾ ಮಕ್ಕಳ ಪರೀಕ್ಷೆ ಸಮಯದಲ್ಲೂ ವಿದ್ಯುತ್ ಕಡಿತ ಮಾಡುವ ಪ್ರಮೇಯ ಬರುವುದಿಲ್ಲ ಎಂದು ಅವರು ಹೇಳಿದರು. ಸಚಿವರ ಜೊತೆಗೆ ಶಾಸಕ ಮೊಯ್ದಿನ್ ಬಾವ, ಉದ್ಯಮಿ ಕೆ.ಎಸ್. ಸೈಯದ್, ರಾಜ್ಯ ಚುನಾವಣೆ ವೀಕ್ಷಕ ಪಿ. ಸುದರ್ಶನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿ ಬಿ.ಎಂ. ಫಾರೂಕ್, ಕೆ. ಸೈಯದ್ ಅಲಿ, ಆಸೀಫ್, ರಹೀಮ್ ಹಕೀಮ್ ಪಾಲ್ಕನ್, ಫರ್ವೇಝ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.





