ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ; ಶ್ರೀಕಾಂತ್ ಫೈನಲ್‌ಗೆ

ಲಕ್ನೋ, ಜ.30: ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಗ್ರಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಇಂದು ಫೈನಲ್ ತಲುಪಿದ್ದಾರೆ.
ಬಾಬು ಬನ್ನಾರಿ ದಾಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಅವರು 11ನೆ ಶ್ರೇಯಾಂಕದ ಬೊನ್ಸಾಕ್ ಪೊನ್ಸಾನ ವಿರುದ್ಧ 21-14, 21-7 ಅಂತರದಿಂದ ಜಯ ಗಳಿಸಿ ಫೈನಲ್ ತಲುಪಿದರು.
ಕೇವಲ 32 ನಿಮಿಷಗಳಲ್ಲಿ ಪೊನ್ಸಾನರನ್ನು ಸೋಲಿಸಿದ ಶ್ರೀಕಾಂತ್ ಅವರು ಪೊನ್ಸಾನರ ವಿರುದ್ಧ ಗೆಲುವಿನ ದಾಖಲೆಯನ್ನು 3-1ಕ್ಕೆ ಏರಿಸಿದರು.
ಕಳೆದ ಎರಡು ವರ್ಷಗಳಲ್ಲಿ ಫೈನಲ್ ತಲುಪಿದ್ದ ಶ್ರೀಕಾಂತ್ ಇದೀಗ ಮೂರನೆ ಬಾರಿ ಪ್ರಶಸ್ತಿಯ ಸುತ್ತು ತಲುಪಿದ್ದಾರೆ. ಫೈನಲ್‌ನಲ್ಲಿ ಶ್ರೀಕಾಂತ್ ಅವರು ಚೀನಾದ ಯುಯಾಂಗ್ ಯಾಕ್ಸಿಯಾಂಗ್‌ರನ್ನು ಎದುರಿಸಲಿದ್ದಾರೆ.
ಜ್ವಾಲಾ -ಅಶ್ವಿನ್‌ಗೆ ಸೋಲು: ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನ್ ಪೊನ್ನಪ್ಪ ಸೋಲು ಅನುಭವಿಸಿದರು.
ಜ್ವಾಲಾ ಮತ್ತು ಅಶ್ವಿನ್ ಅವರು ಮಹಿಳೆಯರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಜುಯಾಂಗ್ ಕಿಯುಂಗ್ ಯುನ್ ಮತ್ತು ಶಿನ್ ಸೆಯುಂಗ್ ಚಾನ್ ವಿರುದ್ಧ 14-21, 12-21 ಅಂತರದಲ್ಲಿ ಸೋತು ನಿರ್ಗಮಿಸಿದರು. ಕೇವಲ 39 ನಿಮಿಷಗಳಲ್ಲಿ ಇವರ ನಡುವಿನ ಹಣಾಹಣಿ ಮುಕ್ತಾಯಗೊಂಡಿತು.





