ಸೋಲಾರ್, ಬಾರ್ ಲಂಚ : ಸಿಬಿಐ ತನಿಖೆ ಸಾಧ್ಯತೆ!; ಕೇಂದ್ರ ಸರಕಾರ ಮಧ್ಯಪ್ರವೇಶ?

ಹೊಸದಿಲ್ಲಿ:ಕೇರಳ ರಾಜಕೀಯವನ್ನು ಕಂಪಿಸುವಂತೆ ಮಾಡಿದ ಸೋಲಾರ್-ಬಾರ್‌ಲಂಚ ಹಗರಣವನ್ನು ರಾಷ್ಟ್ರೀಯ ಮಟ್ಟದ ಚರ್ಚೆಯಾಗಿ ಪರಿವರ್ತಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಉಮ್ಮನ್‌ಚಾಂಡಿ, ಸರಿತಾ ಮತ್ತು ಬಿಜುರಮೇಶ್ ಕೆಲವು ಸಮಯಗಳಿಂದ ರಾಷ್ಟ್ರೀಯ ಮಾಧ್ಯಮಗಳಲ್ಲಿ ತಾರೆಯರಾಗಿದ್ದಾರೆ. ಆದರೆ ಎರಡು ಪ್ರಕರಣಗಳಲ್ಲಿ ಕೋರ್ಟ್‌ನ ಪರಾಮರ್ಶೆ ಮತ್ತು ಪ್ರತಿಪಕ್ಷಗಳ ಪ್ರತಿಭಟನೆಗಳನ್ನು ಗಮನಿಸಿ ಕೇಂದ್ರ ಸರಕಾರ ಮೌನ ಪಾಲಿಸಿದೆ. ಆದರೆ ಈ ಮೌನವನ್ನು ತೊರೆದು ಈಗ ಕೇರಳದ ಕಾನೂನು ಶಿಸ್ತು ಕೆಟ್ಟು ಹೋಗುವೆಡೆಗೆ ಪ್ರತಿಭಟನೆಗಳು ತಲುಪಿರುವುದರಿಂದ ಕೇಂದ್ರ ಸರಕಾರ ಹಸ್ತಕ್ಷೇಪವನ್ನು ನಡೆಸುವ ಸಾಧ್ಯತೆ ಸ್ಪಷ್ಟವಾಗಿದೆ ಎಂದು ವರದಿಯಾಗುತ್ತಿದೆ.ಕೇರಳದ ಹಿರಿಯ ಬಿಜೆಪಿ ನಾಯಕ ಓ.ರಾಜಗೋಪಾಲ್‌ರನ್ನು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಕರೆಯಿಸಿಕೊಂಡು ಕೇರಳದ ಬೆಳವಣಿಗೆಗಳ ಬಗ್ಗೆ ಚರ್ಚಿಸಿರುವುದು ರಾಜಕೀಯ ಉದ್ದೇಶದಿಂದಾಗಿದೆ ಎನ್ನಲಾಗುತ್ತಿದೆ.
ನಂತರ ಓ. ರಾಜಗೋಪಾಲ್ ಕೇರಳ ರಾಜಕೀಯ ಸ್ಥಿತಿಗತಿಗಳ ಬಗ್ಗೆ ರಾಜ್ಯಪಾಲರಿಂದ ವರದಿ ಪಡೆಯಲಾಗುವುದೆಂದು ಕೇಂದ್ರ ಗೃಹ ಸಚಿವರು ತನಗೆ ಭರವಸೆ ನೀಡಿದ್ದಾರೆಂದು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬೇಡಿಕೆಯೊಂದಿಗೆ ನಿನ್ನೆ ರಾಜಗೋಪಾಲ್ ಗೃಹಸಚಿವ ರಾಜ್‌ನಾಥ್‌ಸಿಂಗ್‌ರನ್ನು ಭೇಟಿಯಾಗಿದ್ದರು. ನಿಯಮಸಭೆ(ವಿಧಾನಸಭೆ)ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯ ಬೇಡಿಕೆಯನ್ನು ಕೇಂದ್ರಸರಕಾರದ ಮುಂದೆ ಕೇರಳ ಬಿಜೆಪಿ ಇರಿಸಿಲ್ಲ. ಆದರೆ ಸೋಲಾರ್, ಬಾರ್ ಭ್ರಷ್ಟಾಚಾರ ಸಿಬಿಐ ವಿಚಾರಣೆಗೆ ವಹಿಸಲಿಕ್ಕೆ ರಾಜ್ಯ ಸರಕಾರ ಸಿದ್ಧವಾಗಲಿ ಎಂದು ರಾಜಗೋಪಾಲ್ ಎಚ್ಚರಿಸಿದ್ದಾರೆ. ಕೇರಳದಲ್ಲಿ ಗಂಭೀರವಾದ ರಾಜಕೀಯ ಅನಿಶ್ಚಿತತೆ ತಲೆದೋರಿದೆ ಎಂಬಂತೆ ಕೇಂದ್ರ ಸರಕಾರ ಅಂದಾಜಿಸಿದೆಯೆನ್ನಲಾಗುತ್ತಿದೆ.
ಮುಖ್ಯಮಂತ್ರಿ ಉಮ್ಮನ್ ಚಾಂಡಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೇಂದ್ರ ಬಿಂದುವಾಗಿದ್ದಾರೆ. ಸರಿತಾ. ಎಸ್. ನಾಂರ್ ನೀಡಿದ್ದ ಸಾಕ್ಷ್ಯಗಳು ಈವಿಚಾರವನ್ನು ಸ್ಪಷ್ಟವಾಗಿಸೂಚಿಸುತ್ತಿದೆ. ಆದುದರಿಂದ ಉಮ್ಮನ್‌ಚಾಂಡಿಯನ್ನು ರಾಜಕೀಯವಾಗಿ ಕಟ್ಟಿಹಾಕುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಲಿದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ದಿಲ್ಲಿಯಲ್ಲಿ ಹಣ ನೀಡಿದ್ದೇನೆ ಎಂದು ಸರಿತಾ ಸೋಲಾರ್ ಆಯೋಗದ ಮುಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಬೇಕೆಂದು ರಾಜ್ಯದ ಬಿಜೆಪಿ ಕಾರ್ಯದರ್ಶಿಯಾದ ವಕೀಲ ವಿ.ವಿ. ರಾಜೇಶ್ ದಿಲ್ಲಿ ಪೊಲೀಸ್ ಕಮಿಶನರಿಗೆ ಪತ್ರ ಬರೆದು ಈಗಾಗಲೇ ದೂರು ನೀಡಿದ್ದಾರೆ. 2012 ಡಿಸೆಂಬರ್ 27ಕ್ಕೆ ಚಾಂದ್‌ನಿ ಚೌಕ್‌ನಲ್ಲಿ ಶಾಪಿಂಗ್ ಮಾಲೊಂದರ ಪಾರ್ಕಿಂಗ್ ಸ್ಥಳದಲ್ಲಿ ಮುಖ್ಯಮಂತ್ರಿಯ ನಂಬಿಗಸ್ಥನಾದ ಥಾಮಸ್ ಕುರುವಿಲ್ಲಾರಿಗೆ ಹಣವನ್ನು ನೀಡಿದ್ದೇನೆ ಎಂದು ಸರಿತಾ ಸಾಕ್ಷಿ ನುಡಿದಿದ್ದರು. ಇದರಲ್ಲಿ ಒಳಗೊಂಡಿರುವ ಧೀರಜ್ ಎಂಬಾತ ಹವಾಲ ವ್ಯವಹಾರಸ್ಥನೆಂದು ಶಂಕಿಸಲಾಗುತ್ತಿದೆ. ಮುಖ್ಯಮಂತ್ರಿಗಾಗಿ ನಡೆಸಲಾದ ಲಂಚ ವ್ಯವಹಾರ ದಿಲ್ಲಿ ಪೊಲೀಸ್ ಅಧಿಕಾರ ವ್ಯಾಪ್ತಿಯಲ್ಲಿ ನಡೆದಿರುವುದಾದ್ದರಿಂದ ದಿಲ್ಲಿ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಬೇಕೆಂದು ರಾಜೇಶ್‌ರ ಆಗ್ರಹವಾಗಿದೆ. ದಿಲ್ಲಿ ಪೊಲೀಸ್ ಕಮೀಶನರ್ ರಾಜೇಶ್‌ರ ದೂರನ್ನು ಸ್ವೀಕರಿಸಿದ್ದಾರೆ.
ಈ ಕುರಿತು ಪ್ರಾಥಮಿಕ ಪರಿಶೀಲನೆ ನಡೆಸಿ ಕೇಸು ದಾಖಲಿಸಿದ ಬಳಿಕ ತನಿಖೆ ಸಿಬಿಐಗೆ ಹಸ್ತಾಂತರಿಸಲು ಕೇಂದ್ರ ಯೋಜನೆ ಹಾಕಿಕೊಂಡಿದೆ. ಬಿಜೆಪಿ ಮನಸು ಮಾಡುವುದಿದ್ದರೆ ಸೋಲಾರ್ ಕೇಸನ್ನು ಸಿಬಿಐಯ ಕೈಗೆ ತಲುಪಲಿಸಬಹುದಾಗಿದೆ. ಮುಖ್ಯಮಂತ್ರಿಯನ್ನು ಆರೋಪಿಯಾಗಿಯನ್ನಾಗಿಯೂ ಮಾಡಬಹುದು. ಈ ಎಲ್ಲ ಸಾಧ್ಯತೆಗಳನ್ನು ಬಹಳ ಎಚ್ಚರಿಕೆಯಿಂದ ಬಿಜೆಪಿಯ ಕೇಂದ್ರ ನೇತೃತ್ವವು ಪರಿಶೀಲಿಸುತ್ತಿದೆ. ಸೋಲಾರ್ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಬೇಕೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕಮ್ಮನಂ ರಾಜಶೇಖರ್ ಆಗ್ರಹಿಸಿದ್ದರು. ದಿಲ್ಲಿ ಪೊಲೀಸರಿಗೆ ಪ್ರಾಥಮಿಕ ತನಿಖೆ ಬಳಿಕ ಎಫ್‌ಐಆರ್ ದಾಖಲಿಸುವ ಅವಕಾಶವಿದೆ. ಇಲ್ಲಿ ತೀರ್ಮಾನಿಸಬೇಕಿರುವುದು ದಿಲ್ಲಿ ಪೊಲೀಸ್ ಆಗಿದೆ. ದಿಲ್ಲಿ ಪೊಲೀಸ್ ನಿಯಂತ್ರಣ ಕೇಂದ್ರ ಸರಕಾರದ ಕೈಯಲ್ಲಿದೆ. ಇನ್ನು ದಿಲ್ಲಿ ಪೊಲೀಸರ ಹೊಣೆ ಕೇಜ್ರಿವಾಲ್‌ರ ಕೈಯಲ್ಲಿದ್ದರೂ ತೊಂದರೆಯಿಲ್ಲ.
ಭ್ರಷ್ಟಾಚಾರದ ವಿಚಾರದಲ್ಲಿ ಕೇಜ್ರಿವಾಲ್ ಕಟುಧೋರಣೆಯಿರುವವರು. ಈ ಸ್ಥಿತಿಯಲ್ಲಿ ಸೋಲಾರ್ ಲಂಚ ಪ್ರಕರಣ ದಿಲ್ಲಿಪೊಲೀಸ್ ಮೂಲಕ ತನಿಖೆ ಆಗಲಿದೆೆ ಎಂಬ ಸೂಚನೆ ಲಭಿಸಿದೆ. ಅದರ ಬಳಿಕ ಕೇರಳಮತ್ತು ದಿಲ್ಲಿ ಪ್ರಕರಣದ ಕೇಂದ್ರ ಸ್ಥಾನಕ್ಕೆ ಬರುವುದರಿಂದ ಕೇಂದ್ರ ತನಿಖಾ ಸಂಸ್ಥೆ ವಿಚಾರಣೆ ಕೈಗೆತ್ತಿಕೊಳ್ಳುವುದು ಸುಲಭ ಆಗಲಿದೆ. ಜೊತೆಗೆ ಸಿಬಿಐತನಿಖೆ ಅನಿವಾರ್ಯವೆಂದು ದಿಲ್ಲಿ ಪೊಲೀಸ್ ಹೇಳಿಕೊಳ್ಳಬಹುದು. ದಿಲ್ಲಿಪೊಲೀಸರು ನೀಡುವ ಈ ಒಂದು ವರದಿ ಸಿಬಿಐ ವಿಚಾರಣೆಗೆ ಸಾಲುತ್ತದೆ. ಅಥವಾ ಭ್ರಷ್ಟಾಚಾರ ಪ್ರಕರಣವನ್ನು ನೇರವಾಗಿ ಎತ್ತಿಕೊಳ್ಳುವ ಅಧಿಕಾರ ಸಿಬಿಐಗಿದೆ. ಆದರೆ ಅದು ಕೇಂದ್ರ ಸರಕಾರದ ಇಚ್ಛೆಗೆ ಸಂಬಂಧಿಸಿದ ವಿಚಾರವಾಗಿದೆ. ಜ ಮುಂಬರುವ ಚುನಾವಣೆಯಲ್ಲಿ ಆಂಟನಿ ಅಲ್ಲದಿದ್ದರೆ ಸುಧೀರನ್‌ಗೆ ಕಾಂಗ್ರೆಸ್ ನಾಯಕತ್ವ?
ತಿರುವನಂತಪುರಂ: ಕೇರಳದ ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಕೊನೆ ಮಾತು ಎಕೆ ಆಂಟನಿಯವರದ್ದಾಗಿರುತ್ತದೆ. ಹೈಕಮಾಂಡ್ ನಾಯಕರಾಗಿರುವ ಆಂಟನಿಯಿಂದ ಕೇರಳದಲ್ಲಿ ಕಾಂಗ್ರೆಸನ್ನು ರಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ಈಗ ಎಲ್ಲೆಡೆ ತಲೆಎತ್ತಿದೆ. ಸೋಲಾರ್ ಮತ್ತು ಬಾರ್ ಲಂಚ ಹಗರಣಗಳಿಂದಾಗಿ ಕೇರಳದ ಈಗಿನ ಕಾಂಗ್ರೆಸ್ ನಾಯಕರ ಮುಖ ಕಪ್ಪಿಟ್ಟಿದೆ. ಈ ಅವಸ್ಥೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ಅಸ್ತಿತ್ವ ಪೆಟ್ಟುಬೀಳದಿರಲಿಕ್ಕಾಗಿ ಗ್ರೂಪ್ ಆಟವಾಡುವ ಸದ್ಯದ ನಾಯಕರನ್ನು ದೂರ ಇಟ್ಟು ಎಲ್ಲರಿಗೂ ಸಮ್ಮತರಾದ ಎ.ಕೆ. ಆಂಟನಿಯವರಿಗೆ ರಾಜ್ಯದ ಕಾಂಗ್ರೆಸ್ ಚುಕ್ಕಾಣಿ ವಹಿಸಿಕೊಡಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸುತ್ತಿದೆಯೆಂಬ ಸೂಚನೆ ಲಭಿಸುತ್ತಿದೆ.
ಇತಿಹಾಸದಲ್ಲಿ ಯಾವುದೇ ಕಾಂಗ್ರೆಸ್ ಸರಕಾರ ಎದುರಿಸಿರದಂತಹ ಸ್ಥಿತಿ ಈಗ ಕಾಂಗ್ರೆಸ್ ಕೇರಳದಲ್ಲಿ ಅನುಭವಿಸುತ್ತಿದೆ. ಬಾರ್‌ಲಂಚ, ಸೋಲಾರ್ ಲಂಚ ಹಗರಣದಲ್ಲಿ ಕೋರ್ಟ್‌ಮೂಲಕ ತಾತ್ಕಾಲಿಕ ಸಾಂತ್ವನ ಸಿಕ್ಕಿದೆಯಾದರೂ ಉಮ್ಮನ್ ಚಾಂಡಿ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಬದಲಿ ನಾಯಕನಾಗಿ ರಮೇಶ್ ಚೆನ್ನಿತ್ತಲರನ್ನು ತಂದರೆ ಅದನ್ನು ವಿರೋಧಿಸುವವರು ಬಹಳ ಮಂದಿ ಇದ್ದಾರೆ ಎಂಬುದು ಹೈಕಮಾಂಡ್‌ಗೆ ತಲೆನೋವಾಗಿದೆ. ಸರಕಾರಕ್ಕೆ ಸಂದಿಗ್ಧ ಸ್ಥಿತಿ ಸೃಷ್ಟಿಸಿದುದರ ಹಿಂದೆ ಚೆನ್ನಿತ್ತಲರ ಕೈಗಳಿವೆ ಎಂದು ಕೇರಳದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಆಕ್ರೋಶವಿದೆ. ಆದುದರಿಂದ ಎಲ್ಲ ಗ್ರೂಪ್‌ಗಳಿಗೆ ಸ್ವೀಕಾರಾರ್ಹ ವ್ಯಕ್ತಿ ಆಂಟನಿಯನ್ನು ರಾಜ್ಯ ನಾಯಕತ್ವಕ್ಕೆ ತರುವ ಚಿಂತನೆ ಹೈಕಮಾಂಡ್ ನಡೆಸಿದೆ. ಇದಕ್ಕೆ ಆಂಟನಿ ಈವರೆಗೂ ಸಂಪೂರ್ಣ ಸಹಮತ ವ್ಯಕ್ತಪಡಿಸಿಲ್ಲ. ಆದುದರಿಂದ ಹೈಕಮಾಂಡ್ ಉಮ್ಮನ್‌ಚಾಂಡಿಯ ರಾಜಿನಾಮೆಗೆ ಸೂಚನೆ ನೀಡಿಲ್ಲ. ಕನಿಷ್ಠ ಮುಂದಿನ ಚುನಾವಣೆ ವೇಳೆ ಆಂಟನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸೂಚಿಸುವ ಸಾಧ್ಯತೆಗಳು ದಟ್ಟವಾಗಿವೆ.
ಅದೇ ವೇಳೆ ರಾಜ್ಯ ರಾಜಕೀಯಕ್ಕೆ ನಾಯಕತ್ವ ನೀಡಬಲ್ಲ ಹಲವಾರು ನಾಯಕರು ಕೇರಳದಲ್ಲಿಯೇ ಇದ್ದಾರೆ ಎಂದು ಆಂಟನಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ರಾಜ್ಯಕ್ಕೆ ಮರಳುವ ಕುರಿತು ಅಸಮ್ಮತಿಯನ್ನು ಇದು ಸೂಚಿಸುತ್ತಿದೆ. ಆದುದರಿಂದ ಅವರು ತನ್ನ ಬದಲಿಗೆ ವಿಎಂ ಸುಧೀರನ್‌ರನ್ನು ನಾಯಕತ್ವಕ್ಕೆ ಸೂಚಿಸುವ ಸಾಧ್ಯತೆ ಇದೆ. ಸುಧೀರನ್‌ರ ಕ್ಲೀನ್ ಇಮೇಜ್ ಪಾರ್ಟಿಗೆ ಲಾಭ ತರಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆಯಾದರೂ ಕೇರಳದ ಗ್ರೂಪ್ ರಾಜಕೀಯಕ್ಕೆ ಅವರು ಸ್ವೀಕಾರಾರ್ಹರಲ್ಲ. ಸ್ವತಃ ಉಮ್ಮನ್‌ಚಾಂಡಿ ಇವರನ್ನು ಒಪ್ಪಲಾರರು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಂಟನಿ ಕೇರಳ ರಾಜಕೀಯಕ್ಕೆ ಮರಳುವುದರಿಂದ ಸದ್ಯದ ಎದುರಾದ ಸಮಸ್ಯೆ ಪರಿಹರಿಸಿಕೊಳ್ಳಲು ಉಪಯುಕ್ತವಾಗಲಿದೆ ಎಂದು ಯುಡಿಎಫ್ ಘಟಕ ಪಕ್ಷಗಳಲ್ಲಿಯೂ ಅಭಿಪ್ರಾಯವಿದೆ. ಕಾಂಗ್ರೆಸ್‌ನಿಂದ ದೂರವಾದ ಜಾತ್ಯತೀತ ಓಟುಗಳನ್ನು ಮರಳಿ ಗಳಿಸಲು ಸಾಧ್ಯವಾಗಲಿದೆ ಎಂದೂ ಅಂದಾಜಿಸಲಾಗಿದೆ. ಆಂಟನಿ ಬರುವುದಾದರೆ ಉಮ್ಮನ್ ಚಾಂಡಿಯಿಂದ ವಿರೋಧಿಸಲು ಆಗಲಾರದು. ಇಷ್ಟವಿಲ್ಲದಿದ್ದರೂ ಒಪ್ಪಲೇ ಬೇಕಾದೀತು. ವಿರೋಧಿಸಿದರೆ ಉಮ್ಮನ್ ಚಾಂಡಿ ಒಂಟಿಯಾಗುವ ಅಪಾಯವಿದೆ. ಈ ಎಲ್ಲ ಲೆಕ್ಕಾಚಾರ ಹೈಕಾಂಡ್ ಮುಂದೆ ಆಂಟನಿಯನ್ನು ಮರಳಿ ಕೇರಳಕ್ಕೆ ಕಳುಹಿಸುವ ಅನಿವಾರ್ಯತೆ ಸೃಷ್ಟಿಸಿದೆ.







