ಲಂಡನ್ : ಭಾರತೀಯ ಮೂಲದ ಮುಸ್ಲಿಂ ಧರ್ಮಗುರುಗೆ ಲೀಸ್ಟರ್ ವಿವಿ ಗೌರವ ಡಾಕ್ಟರೇಟ್

ಲಂಡನ್ : ಇಲ್ಲಿನ ಭಾರತೀಯ ಮೂಲದ ಮುಸ್ಲಿಂ ಧರ್ಮಗುರುವೊಬ್ಬರಿಗೆ ಸಮಾಜ ಸೇವೆಗಾಗಿ ಪ್ರತಿಷ್ಠಿತ ಲೀಸ್ಟರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದು ವರದಿಯಾಗಿದೆ . ಇಲ್ಲಿನ ಲೀಸ್ಟರ್ ಕೇಂದ್ರೀಯ ಮಸೀದಿಯಲ್ಲಿ ಇಮಾಂ (ಧರ್ಮಗುರು ) ಆಗಿರುವ ಹಾಗು ಇಂಗ್ಲೆಂಡ್ ನ ಪ್ರಮುಖ ಧಾರ್ಮಿಕ ಮುಖಂಡರಲ್ಲಿ ಒಬ್ಬರಾದ ಮುಹಮ್ಮದ್ ಶಾಹಿದ್ ರಝಾ ಅವರು ಮೂಲತ: ಬಿಹಾರದವರಾಗಿದ್ದು ಇಂಗ್ಲೆಂಡ್ ಗೆ ಹೋಗುವ ಮೊದಲು ಮೊರಾದಾಬಾದ್ , ಆಗ್ರಾ ಹಾಗು ಮೀರಟ್ ಗಳಲ್ಲಿ ಸೇವೆ ಸಲ್ಲಿಸಿದ್ದರು.
ನಾನು ೭೦ ರ ದಶಕದಲ್ಲಿ ಇಲ್ಲಿಗೆ ಬಂಡ ಮೇಲೆ ಲೀಸ್ಟರ್ ನನ್ನ ಪಾಲಿಗೆ ಮಹತ್ವದ ಸ್ಥಳವಾಗಿದೆ. ಇಲ್ಲಿನ ಮಸೀದಿಯಲ್ಲಿ ಸೇವೆ ಪ್ರಾರಂಭಿಸಿದ ಬಳಿಕ ಸ್ಥಳೀಯ ಮಕ್ಕಳಲ್ಲಿ ನೈತಿಕ ಹಾಗು ಧಾರ್ಮಿಕ ಶಿಕ್ಷಣ ನೀಡಲು ನಾನು ಆದ್ಯತೆ ನೀಡಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. " ಮಕ್ಕಳು ಶಾಲಾ ಕಾಲೇಜುಗಳಲ್ಲಿ ಚೆನ್ನಾಗಿ ಅಧ್ಯಯನ ಮಾಡಬೇಕು ಹಾಗು ಉತ್ತಮ ಸಾಧನೆ ತೋರಬೇಕು . ಆ ಮೂಲಕ ತಾವಿರುವ ಸಮಾಜಕ್ಕೆ , ದೇಶಕ್ಕೆ ಅವರು ಕೊಡುಗೆ ನೀಡಬೇಕು ಎಂಬುದು ನಾನು ಅವರಿಗೆ ಸದಾ ಹೇಳುವ ಪಾಠ . ನನ್ನ ಹಲವಾರು ವಿದ್ಯಾರ್ಥಿಗಳು ಲೀಸ್ಟರ್ ನಿಂದ ಪದವಿ ಪಡೆದು ಈಗ ಸರಕಾರೀ ಅಧಿಕಾರಿಗಳಾಗಿ, ವೈದ್ಯರಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದನ್ನು ನೋಡಿದಾಗ ನನಗೆ ಅತ್ಯಂತ ಸಂತಸವಾಗುತ್ತದೆ ಎಂದು ಮುಹಮ್ಮದ್ ಅವರು ಹೇಳಿದ್ದಾರೆ. ಇಂಗ್ಲೆಂಡ್ ನಲ್ಲಿ ಇಮಾಮರಿಗೆ ತರಬೇತಿ ನೀಡುವ ಪ್ರಪ್ರಥಮ ಕೋರ್ಸು ಪ್ರಾರಂಭಿಸಿದ ಕೀರ್ತಿಯೂ ಇವರಿಗಿದೆ.
ಆದ್ದರಿಂದ ನನಗೆ ಈ ಡಾಕ್ಟರೇಟ್ ಗುರವದಿಂದ ಖುಷಿಯಾಗಿದೆ. ಇದು ಇನ್ನಷ್ಟು ಮುಸ್ಲಿಂ ಯುವಜನತೆಗೆ ಸ್ಪೂರ್ತಿಯಾಗಲಿ ಎಂದು ಅವರು ಆಶಿಸಿದ್ದಾರೆ.
ಇತ್ತೀಚಿಗೆ ನಡೆದ ವಿವಿಯ ಘಟಿಕೋತ್ಸವದಲ್ಲಿ ಅಂತಾರಾಷ್ಟೀಯ ಗಣ್ಯರು, ವಿದ್ಯಾರ್ಥಿಗಳು ಹಾಗು ಪೋಷಕರ ಸಮ್ಮುಖದಲ್ಲಿ ವಿವಿಯ ಕುಲಪತಿ ಲಾರ್ಡ್ ಗ್ರೋಕೊಟ್ ಅವರು ಈ ಗೌರವ ಪದವಿಯನ್ನು ಮುಹಮ್ಮದ್ ಅವರಿಗೆ ಪ್ರದಾನ ಮಾಡಿದರು.





