ಫೆ.1ರಿಂದ ಮಂಗಳೂರಿನಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ: ಪೊಲೀಸ್ ಆಯುಕ್ತ

ಮಂಗಳೂರು, ಜ.31: ಫೆ.1ರಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಕಾನೂನು ಮಂಗಳೂರಿನಲ್ಲೂ ಜಾರಿಗೆ ಬರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೆ ಕೆಲವು ಕಡೆಗಳಲ್ಲಿ ಜಾರಿಯಾಗಿರುವ ಹೆಲ್ಮೆಟ್ ಕಡ್ಡಾಯ ಕಾನೂನು ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಉಳಿದ ಕಡೆಗಳಲ್ಲಿಯೂ ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯ 180 ಖಾಲಿ ಹುದ್ದೆಗಳಿಗೆ ನೇಮಕ
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ 180 ಪೊಲೀಸ್ ಅಧಿಕಾರಿಗಳು ಸಹಿತ ಸಿಬ್ಬಂದಿಯ ನೇಮಕಾತಿ ನಡೆದಿದೆ. ಅವರನ್ನು ಈಗಾಗಲೆ ಧಾರವಾಡ ಮತ್ತು ಬೆಂಗಳೂರಿನಲ್ಲಿ ತರಬೇತಿಗೆ ನಿಯೋಜಿಸಲಾಗಿದೆ. ಮುಂದಿನ ಆರು ತಿಂಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಕಮಿಷನರ್ ತಿಳಿಸಿದರು.
ಮಂಗಳೂರು ಪೊಲೀಸ್ ಕಮೀಶನರೇಟ್ ವ್ಯಾಪ್ತಿಯಲ್ಲಿ ಒಟ್ಟು 1,789 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 1,002 ಹುದ್ದೆಗಳಿಗೆ ಮಾತ್ರ ನೇಮಕಾತಿ ನಡೆದಿದೆ. ಉಳಿದಂತೆ ಪ್ರಸಕ್ತ 180 ಹುದ್ದೆಗಳಿಗೆ ನೇಮಕಾತಿಯಾಗಿದ್ದರೂ ಇನ್ನೂ 607 ಹುದ್ದೆಗಳಿಗೆ ನೇಮಕಾತಿ ಆಗಬೇಕಾಗಿದೆ ಎಂದು ಪೊಲೀಸ್ ಕಮಿಷನರ್ ಚಂದ್ರಶೇಖರ್ ತಿಳಿಸಿದರು.





