ಪಯಸ್ವಿನಿ ನದಿಯಲ್ಲಿ ಮೀನು ಹಿಡಿಯಲು ಬಂದವರಿಗೆ ನಪಂ ಅಧ್ಯಕ್ಷರ ತಡೆ

ಸುಳ್ಯ, ಜ.31: ಪಯಸ್ವಿನಿ ನದಿಯಲ್ಲಿ ಮೀನು ಹಿಡಿಯಲು ಬಂದ ಬೆಸ್ತರನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು ವಾಪಾಸ್ ಕಳುಹಿಸಿದ ಘಟನೆ ನಡೆದಿದೆ. ಪ್ರತಿವರ್ಷ ಈ ಅವಧಿಯಲ್ಲಿ ಪಯಸ್ವಿನಿ ನದಿಯ ವಿವಿಧ ಭಾಗಗಳಲ್ಲಿ ದೂರದೂರುಗಳಿಂದ ಬೆಸ್ತರು ಬಂದು ಮೀನು ಹಿಡಿದು ಮಾರಾಟ ಮಾಡುತ್ತಿದ್ದರು. ಹೀಗೆ ಮೀನು ಹಿಡಿಯುವ ವೇಳೆ ಬೆಸ್ತರು ನದಿಯಲ್ಲಿ ಮೈಲುತುತ್ತು ಕಾರ್ಬೈಡ್ ಬೆರೆಸುತ್ತಿದ್ದಾರೆಂಬ ಆರೋಪವೂ ಕೇಳಿಬರುತ್ತಿತ್ತು. ಈ ಕುರಿತಂತೆ ಕೆಲವು ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿಯನ್ನೂ ನಡೆಸಲಾಗಿತ್ತು. ಶನಿವಾರ ಸುಳ್ಯದ ಓಡಬಾ ಮಂಡೋವಿ ಶೋರೂಂ ಬಳಿ ಎರಡು ಪಿಕಪ್ ವಾಹನದಲ್ಲಿ ಮೀನು ಹಿಡಿಯಲು ಬೆಸ್ತರು ತಮ್ಮೆಲ್ಲಾ ಸಾಮಗ್ರಿಗಳನ್ನು ತಂದು ಟೆಂಟ್‌ಗಳನ್ನು ಕಟ್ಟುತ್ತಿದ್ದ ದೃಶ್ಯ ಕಂಡ ಸ್ಥಳೀಯರು ನಗರ ಪಂಚಾಯತ್ ಅಧ್ಯಕ್ಷರಿಗೆ ದೂರು ನೀಡಿದರು. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಬೆಸ್ತರನ್ನು ವಾಪಾಸ್ ಹೋಗುವಂತೆ ತಿಳಿಸಿದರು. ತಾವು ಯಾವುದೇ ಕೆಮಿಕಲ್‌ಗಳನ್ನು ಬಳಸುತ್ತಿಲ್ಲ. ಇದು ನಮ್ಮ ಪಾರಂಪರಿಕ ಕಸುಬು. ಸಾಂಪ್ರದಾಯಿಕ ರೀತಿಯಲ್ಲಿಯೇ ಮೀನು ಹಿಡಿಯುತ್ತಿದ್ದೇವೆ. ನಾವು ಕೂಡಾ ಈ ನದಿಯ ನೀರು ಕುಡಿದೇ ಬದುಕುವವರು. ಅಂಥ ಅನ್ಯಾಯ ಮಾಡುವುದಿಲ್ಲ. ಹಾಗಾಗಿ ಪಾರಂಪರಿಕ ವೃತ್ತಿ ಮುಂದುವರಿಸುವುದಕ್ಕೆ ಅನುಮತಿ ನೀಡಬೇಕೆಂದು ಬೆಸ್ತರು ಪರಿಪರಿಯಾಗಿ ವಿನಂತಿಸಿದರೂ ಕೇಳದ ಅಧ್ಯಕ್ಷರು ಸುಳ್ಯ ಸಾರ್ವಜನಿಕರ ಹಿತಾಸಕ್ತಿಯಿಂದ ಇದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿ ಅವರನ್ನು ಹಿಂದಕ್ಕೆ ಕಳುಹಿಸಿದರು.





