ಬೆಂಗಳೂರು;ಕೊಳ್ಳೆಗಾಲ ತಾಲ್ಲೂಕಿನ ರೈತರು ಹೂಕೃಷಿಯಲ್ಲಿ ವಿಶೇಷ ಆಸಕ್ತಿ
ಬೆಂಗಳೂರು.ಜ.31:ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ರೈತರು ಹೂಕೃಷಿಯಲ್ಲಿ ವಿಶೇಷ ಆಸಕ್ತಿ ತೋರಿಸಿದ್ದಾರೆ. ಇದರಿಂದ ಅವರಿಗೆ ಹೆಚ್ಚುವರಿ ಗಳಿಕೆಗೆ ದಾರಿಯಾಗಿದೆ. ಪಾಲಿಮನೆ ತಂತ್ರಜ್ಞಾನದಿಂದ ಹೂಕೃಷಿ ನಡೆಸುತ್ತಿದ್ದು, 15 ರೈತರು ಪ್ರತಿ ತಿಂಗಳು 60 ಸಾವಿರ ಜೆರ್ಬರಾ ಹೂ ಗಿಡಗಳನ್ನು ಬೆಳೆಸುತ್ತಿದ್ದಾರೆ. ಪ್ರತಿಯೊಂದು ಜರ್ಬರಾ ಗಿಡವು 6 ರೂಪಾಯಿಂದ 7 ರೂಪಾಯಿಗಳವರೆಗೆ ಬೆಂಗಳೂರಿನಲ್ಲಿ ಮಾರಾಟವಾಗುತ್ತಿವೆ. ಪಾಲಿ ಮನೆಗಳ ಮೂಲಕ ಉಷ್ಣಾಂಶ ಮತ್ತು ತೇವಾಂಶವನ್ನು ನಿಯಂತ್ರಣ ಮಾಡಬಹುದಾಗಿದ್ದು, ರೈತರು ನಿರೀಕ್ಷಿತ ಫಸಲು ಮತ್ತು ಆದಾಯವನ್ನು ಪಡೆಯಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಹೆಚ್. ಎಂ. ನಾಗರಾಜ್ ಹೇಳಿದ್ದಾರೆ.
ಒಂದು ಎಕರೆ ಪ್ರದೇಶದಲ್ಲಿ ಪಾಲಿಮನೆ ನಿರ್ಮಿಸಲು ತೋಟಗಾರಿಕಾ ಇಲಾಖೆಯಿಂದ 16 ಲಕ್ಷ 88 ಸಾವಿರ ರೂಪಾಯಿ ಸಹಾಯ ಧನ ನೀಡಲಾಗುವುದು. ರೈತರು 35 ರಿಂದ 45 ಲಕ್ಷಗಳ ವರೆಗೆ ಬಂಡವಾಳ ಹೂಡಬೇಕಾಗುತ್ತದೆ. ಸಸಿ ನೆಟ್ಟ 3 ತಿಂಗಳ ನಂತರ ಹೂ ಬಿಡಲು ಪ್ರಾರಂಭವಾಗುತ್ತದೆ. 3 ರಿಂದ 4 ವರ್ಷಗಳ ಕಾಲ ಈ ಗಿಡಗಳು ಫಸಲು ನೀಡುತ್ತವೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಶಿಧರ್ ಹೇಳಿದ್ದಾರೆ.





