ಮುಂಬೈ;45ರ ಹರೆಯದ ಶೇ.61 ಭಾರತೀಯರಿಗೆ ಐದು ವರ್ಷಗಳಲ್ಲಿ ನಿವೃತ್ತಿಯ ಬಯಕೆ:ಸಮೀಕ್ಷೆ
ಮುಂಬೈ,ಜ.31: ಭಾರತದಲ್ಲಿ ದುಡಿಯುವ ವರ್ಗದಲ್ಲಿ 45ಕ್ಕೂ ಹೆಚ್ಚಿನ ವಯೋಮಾನದ ಶೇ.45ರಷ್ಟು ಜನರು ಮುಂದಿನ ಐದು ವರ್ಷಗಳಲ್ಲಿ ನಿವೃತ್ತರಾಗಲು ಬಯಸುತ್ತಾರೆ ಮತ್ತು ಉದ್ಯೋಗ ಸಂಬಂಧಿತ ಒತ್ತಡವು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದು ಹೆಚ್ಚಿನವರ ಹೇಳಿಕೆಯಾಗಿದೆ. ನಿವೃತ್ತಿ ಪಡೆಯಲು ಸಾಧ್ಯವಾಗದವರಿಗೆ ಆರ್ಥಿಕ ಮುಗ್ಗಟ್ಟು ಮುಖ್ಯ ಕಾರಣವಾಗಿದೆ ಎಂದು ಎಚ್‌ಎಸ್‌ಬಿಸಿ ಸಮೀಕ್ಷೆಯು ಹೇಳಿದೆ.
ಎಚ್‌ಎಸ್‌ಬಿಸಿಯು ತನ್ನ ‘‘ದಿ ಫ್ಯೂಚರ್ ಆಫ್ ರಿಟೈರ್‌ಮೆಂಟ್ ಹೆಲ್ದಿ ನ್ಯೂ ಬಿಗಿನಿಂಗ್ಸ್ ಸ್ಟಡಿ’’ಯ ಇತ್ತೀಚಿನ ಆವೃತ್ತಿಯಲ್ಲಿ ಈ ಅಂಶಗಳನ್ನು ಬಹಿರಂಗಗೊಳಿಸಿದೆ.
ಆದರೆ ಹೀಗೆ ಐದು ವರ್ಷಗಳಲ್ಲಿ ನಿವೃತ್ತಿ ಬಯಸುವವರ ಪೈಕಿ ಶೇ.14ರಷ್ಟು ಜನರು ಹಾಗೆ ಮಾಡಲು ತಮಗೆ ಸಾಧ್ಯವಾಗದು ಎಂದು ಭಾವಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದರಿಂದ ತಾವು ನಿವೃತ್ತರಾಗುವುದಿಲ್ಲ ಎಂದು ಹೆಚ್ಚಿನವರು ಹೇಳಿದ್ದಾರೆ.
ಪ್ರಾರಂಭದಿಂದಲೇ ಉಳಿತಾಯ ಮತ್ತು ನಿವೃತ್ತಿಗೆ ವ್ಯವಸ್ಥಿತ ಯೋಜನೆಯು ಭಾರತೀಯರ ತುರ್ತು ಅಗತ್ಯವಾಗಿದೆಯೆಂದು ಸಮೀಕ್ಷೆಯು ಬೆಟ್ಟು ಮಾಡಿದೆ.
ನಿವೃತ್ತಿಯು ಹೊಸ ಆವಿಷ್ಕಾರಕ್ಕೆ ಮತ್ತು ಹೊಸ ಆರಂಭಕ್ಕೆ ಅವಕಾಶವಾಗಬಹುದು ಎನ್ನುವುದು ವಿಶ್ವಾದ್ಯಂತ ಜನರ ಅಭಿಪ್ರಾಯವಾಗಿದೆ. ಆರ್ಥಿಕ ನಿರ್ಬಂಧಗಳು ಹಲವರಿಗೆ ತಾವು ನಿವೃತ್ತರಾಗಲು ಬಯಸಿದರೂ ಅದಕ್ಕೆ ಅವಕಾಶ ನೀಡುವುದಿಲ್ಲ. ತಾವೆಂದೂ ದುಡಿಮೆಯಿಂದ ಸಂಪೂರ್ಣವಾಗಿ ನಿವೃತ್ತರಾಗಲು ಸಾಧ್ಯವಿಲ್ಲ ಎಂದು ಪ್ರತಿ ಐವರಲ್ಲಿ ಒಬ್ಬರು ಆತಂಕದಲ್ಲಿರುತ್ತಾರೆ,ಹೀಗಾಗಿ ಉತ್ತಮ ಹಣಕಾಸು ಯೋಜನೆ ಯ ಅಗತ್ಯ ಈ ಹಿಂದೆಂದಿಗಿಂತಲೂ ಹೆಚ್ಚು ಬಲವಾಗಿದೆ ಎಂದು ಎಚ್‌ಎಸ್‌ಬಿಸಿಯ ರಿಟೇಲ್ ಬ್ಯಾಂಕಿಂಗ್ ಮತ್ತು ವೆಲ್ತ್ ಮ್ಯಾನೇಜಮೆಂಟ್‌ನ ಭಾರತೀಯ ಮುಖ್ಯಸ್ಥ ಎಸ್.ರಾಮಕೃಷ್ಣನ್ ಹೇಳಿದರು.
ಜಾಗತಿಕವಾಗಿ 17 ರಾಷ್ಟ್ರಗಳ 18,000ಕ್ಕೂ ಅಧಿಕ ಜನರನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ ಅರ್ಜೆಂಟೀನಾ(ಶೇ.78),ಫ್ರಾನ್ಸ್(ಶೇ.77),ಚೀನಾ(ಶೇ.75) ಮತ್ತು ಬ್ರಿಟನ್(ಶೇ.75)ಗಳಲ್ಲಿ ಅವಧಿಗೆ ಮುನ್ನವೇ ನಿವೃತ್ತಿ ಬಯಸುವವರ ಸಂಖ್ಯೆ ಹೆಚ್ಚು ಎಂದು ತಿಳಿದುಬಂದಿದೆ.





