ಹಳಯಂಗಡಿ: ಬಸ್ ನಿಲ್ದಾಣದಲ್ಲಿ ಮೀನು ಮಾರಾಟ; ಸ್ಥಳೀಯರ ಅಸಮಾದಾನ

ಹಳೆಯಂಗಡಿ, ಜ.31: ಹಳೆಯಂಗಡಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದ್ದರೂ ಮೀನು ಮಾರಾಟದ ಮಹಿಳೆಯರು ಹಳೆಯಂಗಡಿ ಪೇಟೆಯ ಬಸ್ ನಿಲ್ದಾಣದಲ್ಲಿ ಮೀನುಮಾರಾಟದಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುವುದಲ್ಲದೆ, ಬಸ್ ನಿಲ್ದಾಣ ಬ್ಯಾನರ್, ಬಂಟಿಂಗ್ಸ್ ಗಳಿಂದ ತುಂಬಿ ತುಳುಕುತ್ತಿದ್ದು ಪೇಟೆಯ ಅಂಧವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮೀನು ಮಾರಾಟಮಾಡುವವರು ಮಾರುಕಟ್ಟೆಯಲ್ಲೇ ಮೀನು ಮಾರುವಂತೆ ಹಳೆಯಂಗಡಿ ಗ್ರಾಮ ಪಂಚಾಯತ್ ಹಲವು ಬಾರಿ ಸೂಚಿಸಿದ್ದರೂ ಕ್ಯಾರೇ ಅನ್ನುತ್ತಿಲ್ಲ ಎಂಬ ಆರೋಪಗಳು ಪಂಚಾಯತ್ ನಿಂದಲೂ ಕೇಳಿ ಬಂದಿದೆ.
"ಮೀನು ಮಾರುವ ಬ್ಯಾರಿಗಳು ಮಾರ್ಗದಲ್ಲಿ ವ್ಯಾಪಾರ ಮಾಡುವುದರಿಂದ ಮಾರುಕಟ್ಟೆಗೆ ಗ್ರಾಹಕರು ಬರುವುದಿಲ್ಲ" ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ. ಅದರೆ, ಬೆಳಗ್ಗಿನ ವೇಳೆ ಮಂಗಳೂರು, ಮಲ್ಪೆಯಿಂದ ಬರುವ ಮೀನನ್ನು ಹಂಚಿಕೊಳ್ಳುವ ಸಮಯದಲ್ಲಿ ಗ್ರಾಹಕರು ಕೇಳಿದರೆ ನೀಡುತ್ತೇವೆ. ಆ ಬಳಿಕ ಊರೂರು ಸುತ್ತಿ ವ್ಯಾಪಾರ ಮಾಡುತ್ತೇವೆ ಹೊರತು ಬೆಳಗ್ಗಿನಿಂದ ಸಂಜೆಯ ವರೆಗೆ ಅಲ್ಲೆ ಇದ್ದು ವ್ಯಾಪಾರ ಮಾಡುತ್ತಿಲ್ಲ ಎಂದು ಮೀನು ಮಾರಾಟ ಮಾಡುವ ಮುಸ್ಲಿಂ ವ್ಯಾಪಾರಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
ಮೀನು ಮಾರಾಟ ಮಾಡುವುದರಿಂದ ಮೀನಿನ ನೀರು ಬಸ್ ನಿಲ್ದಾಣದಲದ ಬದಿಯಲ್ಲಿರುವ ಸಣ್ಣ ತೋಡಿಗೆ ಮೀನಿನ ನೀರು ಹರಿಬಿಡಲಾಗುತ್ತಿದೆ. ಆದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಿದ್ದು ಮಾರಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ, ಮೀನು ಖರೀದಿಗೆ ಗಿರಾಕಿಗಳು ರಸ್ತೆಯಲ್ಲಿ ನಿಲ್ಲುವುದರಿಂದ ಕಿರಿದಾದ ರಸ್ತೆ ಸಂಪೂರ್ಣ ಬಂದ್ ಅಗುವ ಜೊತೆಗೆ ಸಣ್ಣ ಪುಟ್ಟ ಅಪಘಾತಗಳೂ ಸಂಭವಿಸುತ್ತಿರುತ್ತವೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಸಂಬಂಧ ಪಟ್ಟ ಹಳೆಯಂಗಡಿ ಗ್ರಾಮ ಪಂಚಾಯತ್, ಟ್ರಾಪಿಕ್ ಪೊಲೀಸರು ಶೀಘ್ರ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.







