ಒಬಾಮರಿಂದ ಅಮೆರಿಕದ ಮಸೀದಿಗೆ ಮೊದಲ ಭೇಟಿ
ವಾಶಿಂಗ್ಟನ್, ಜ. 31: ಧಾರ್ಮಿಕ ಸ್ವಾತಂತ್ರವನ್ನು ಖಾತರಿಪಡಿಸುವುದಕ್ಕಾಗಿ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮುಂದಿನ ವಾರ ಅಮೆರಿಕದ ಮಸೀದಿಯೊಂದಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ. ಇದು ಅಧ್ಯಕ್ಷರಾಗಿ ಮಸೀದಿಗೆ ಅವರು ನೀಡುತ್ತಿರುವ ಮೊದಲ ಭೇಟಿಯಾಗಿದೆ.
ಅಮೆರಿಕದಲ್ಲಿ ಮುಸ್ಲಿಮ್ ವಿರೋಧಿ ಭಾವನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಬಾಮರ ಮಸೀದಿ ಭೇಟಿ ಮಹತ್ವ ಪಡೆದುಕೊಂಡಿದೆ. ಒಬಾಮ ಬುಧವಾರ ಇಸ್ಲಾಮಿಕ್ ಸೊಸೈಟಿ ಆಫ್ ಬಾಲ್ಟಿಮೋರ್ ಮಸೀದಿಗೆ ಭೇಟಿ ನೀಡಲಿದ್ದಾರೆ ಹಾಗೂ ಅಲ್ಲಿ ಅವರು ಸಮುದಾಯದ ನಾಯಕರೊಂದಿಗೆ ದುಂಡು ಮೇಜಿನ ಸಭೆ ನಡೆಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
ತನ್ನ ವಿದೇಶ ಪ್ರವಾಸಗಳ ವೇಳೆ ಒಬಾಮ ಬೇರೆ ದೇಶಗಳ ಮಸೀದಿಗಳಿಗೆ ಭೇಟಿ ನೀಡಿದ್ದಾರೆ. ರಾಜಕಾರಣಿಗಳು, ಅದರಲ್ಲೂ ಮುಖ್ಯವಾಗಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಮುಸ್ಲಿಮ್ ವಿರೋಧಿ ಹೇಳಿಕೆಗಳನ್ನು ತಿರಸ್ಕರಿಸುವಂತೆ ಒಬಾಮ ಅಮೆರಿಕನ್ನರಿಗೆ ಮನವಿ ಮಾಡಿದ್ದಾರೆ.





