ರಶ್ಯ ದಾಳಿಯಲ್ಲಿ 1,400 ನಾಗರಿಕರು ಹತ

ಸಿರಿಯದ ಯುದ್ಧ ಭೂಮಿಯಿಂದ ದೂರದ ನಾಗರಿಕ ಪ್ರದೇಶಗಳೇ ಗುರಿ: ನಿವಾಸಿಗಳು
ಅಮ್ಮಾನ್, ಜ. 31: ಸುಮಾರು ನಾಲ್ಕು ತಿಂಗಳ ಹಿಂದೆ ರಶ್ಯ ವಾಯು ದಾಳಿ ನಡೆಸಲು ಆರಂಭಿಸಿದಂದಿನಿಂದ ಸಿರಿಯದಲ್ಲಿ ಸುಮಾರು 1,400 ನಾಗರಿಕರು ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ನ ‘ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್’ ಹೇಳಿದೆ.
ಅದೇ ವೇಳೆ, ರಶ್ಯದ ವಾಯು ದಾಳಿಗಳಲ್ಲಿ 965 ಐಸಿಸ್ ಉಗ್ರರು ಹಾಗೂ ಇತರ ಬಂಡುಕೋರ ಗುಂಪುಗಳ 1,233 ಹೋರಾಟಗಾರರು ಕೂಡ ಹತರಾಗಿದ್ದಾರೆ ಎಂದು ಅದು ಹೇಳಿದೆ.
ರಶ್ಯ ಮತ್ತು ಸಿರಿಯಗಳು ಜಂಟಿಯಾಗಿ ನಡೆಸುತ್ತಿರುವ ವಾಯು ದಾಳಿಯನ್ನು ನಿಲ್ಲಿಸುವಂತೆ ಜಿನೇವ ಶಾಂತಿ ಮಾತುಕತೆಗಳಿಗಾಗಿ ತೆರಳಿರುವ ಸಿರಿಯದ ಪ್ರಮುಖ ಪ್ರತಿಪಕ್ಷ ಶನಿವಾರ ಒತ್ತಾಯಿಸಿದೆ. ಈ ದಾಳಿಗಳು ಬಂಡುಕೋರರ ವಶದಲ್ಲಿರುವ ಪ್ರದೇಶಗಳಲ್ಲಿರುವ ನಾಗರಿಕರನ್ನೇ ಹೆಚ್ಚಾಗಿ ಗುರಿಯಾಗಿಸಿವೆ ಎಂದು ಅವರು ಆರೋಪಿಸಿದ್ದಾರೆ.
ಸಿರಿಯ ಸರಕಾರದೊಂದಿಗೆ ಶಾಂತಿ ಮಾತುಕತೆಯಲ್ಲಿ ತೊಡಗಬೇಕಾದರೆ ಈ ಜಂಟಿ ದಾಳಿ ನಿಲ್ಲಬೇಕು ಎಂಬ ಪೂರ್ವ ಶರತ್ತನ್ನು ಅವರು ಹಾಕಿದ್ದಾರೆ.
ತನ್ನ ಮಿತ್ರ ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್‌ಗೆ ನೆರವು ನೀಡುವ ಭಾಗವಾಗಿ ರಶ್ಯ ಸೆಪ್ಟಂಬರ್ 30ರಂದು ಸಿರಿಯದಲ್ಲಿ ಬೃಹತ್ ಪ್ರಮಾಣದಲ್ಲಿ ವಾಯು ದಾಳಿಯನ್ನು ಆರಂಭಿಸಿತ್ತು. 2015ರ ಆರಂಭದಲ್ಲಿ ಸಿರಿಯದ ಅಧ್ಯಕ್ಷರ ಪಡೆಗಳು ಹಿನ್ನಡ ಅನುಭವಿಸಿದ ಬಳಿಕ, ರಶ್ಯದ ವಾಯು ದಾಳಿಗಳು ಅಧ್ಯಕ್ಷರ ಪಡೆಗಳು ಮೇಲುಗೈ ಪಡೆಯುವಲ್ಲಿ ನೆರವಾದವು. ರಶ್ಯದ ಭೀಕರ ವಾಯು ದಾಳಿಗಳ ಪರಿಣಾಮವಾಗಿ ಬಂಡುಕೋರ ಗುಂಪುಗಳು ಹಿಮ್ಮೆಟ್ಟಿದವು.
ತಾನು ಐಸಿಸ್ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ರಶ್ಯ ಹೇಳಿಕೊಳ್ಳುತ್ತಿದೆ. ಆದರೆ, ಯುದ್ಧ ಭೂಮಿಯಿಂದ ದೂರವಿರುವ ನಾಗರಿಕ ಪ್ರದೇಶಗಳ ಮೇಲೆ ರಶ್ಯದ ಯುದ್ಧ ವಿಮಾನಗಳು ವಿವೇಚನಾರಹಿತ ಬಾಂಬ್ ದಾಳಿಗಳನ್ನು ನಡೆಸುತ್ತಿದ್ದು, ನೂರಾರು ಸಂಖ್ಯೆಯಲ್ಲಿ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ನಿವಾಸಿಗಳು ಮತ್ತು ಬಂಡುಕೋರರು ಆರೋಪಿಸುತ್ತಾರೆ.





