ಲಸಿಗರ ವ್ಯಥೆಯನ್ನು ಮತ್ತೆ ಕೆದಕಿದ ಮಕ್ಕಳ ಸಾವು: ಏಜಿಯನ್ ಸಮುದ್ರದಲ್ಲಿ ದೋಣಿ ಮಗುಚಿ 40 ಸಾವು
ಇಸ್ತಾಂಬುಲ್, ಜ. 31: ಕಳೆದ ವಾರ ಟರ್ಕಿಯಿಂದ ಗ್ರೀಸ್‌ಗೆ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಏಜಿಯನ್ ಸಮುದ್ರದಲ್ಲಿ ಬಂಡೆಗೆ ಅಪ್ಪಳಿಸಿ ಮಗುಚಿ ಬಿದ್ದಾಗ ಸುಮಾರು 40 ಮಂದಿ ಮುಳುಗಿ ಮೃತಪಟ್ಟರು ಹಾಗೂ 75 ಮಂದಿಯನ್ನು ರಕ್ಷಿಸಲಾಯಿತು.
ಮೃತಪಟ್ಟವರಲ್ಲಿ ಕನಿಷ್ಠ 10 ಮಕ್ಕಳೂ ಇದ್ದರು. ಸಮುದ್ರ ತೀರದಲ್ಲಿ ಮಕ್ಕಳ ನಿರ್ಜೀವ ದೇಹಗಳು ಬಿದ್ದುಕೊಂಡಿದ್ದ ಚಿತ್ರಗಳು ಮತ್ತೊಮ್ಮೆ ಜಗತ್ತಿನ ಕಣ್ಣಿಗೆ ರಾಚಿದವು. ಉತ್ತಮ ಬದುಕನ್ನು ಹುಡುಕುತ್ತಾ ಅರಿಯದ ದೇಶವೊಂದಕ್ಕೆ ತಮ್ಮ ಜೀವಗಳನ್ನೇ ಪಣವಾಗಿಟ್ಟು ಅಪಾಯಕಾರಿ ಸಮುದ್ರ ಯಾನ ಕೈಗೊಳ್ಳುವ ನಿರಾಶ್ರಿತರ ದುರಂತ ಕತೆಯೊಂದು ಮತ್ತೊಮ್ಮೆ ಜಗತ್ತಿನ ಮಾಧ್ಯಮಗಳಲ್ಲಿ ಸುದ್ದಿಯಾಯಿತು.
ಕೆಲವು ತಿಂಗಳ ಹಿಂದೆ ಸಮುದ್ರ ದಂಡೆಯ ಮೇಲೆ ಬೋರಲಾಗಿ ಬಿದ್ದಿದ್ದ ಮೂರು ವರ್ಷದ ಬಾಲಕ ಅಯ್ಲನ್ ಕುರ್ದಿಯ ನಿರ್ಜೀೀವ ದೇಹ ಜಗತ್ತಿನ ಆತ್ಮಸಾಕ್ಷಿಯನ್ನು ಕಲಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ದುರಂತಕ್ಕೆ ಜಗತ್ತು ಹೆಚ್ಚಿನ ಗಮನ ನೀಡಿಲ್ಲವಾದರೂ, ಸಾವಿನ ಸಂಖ್ಯೆಗಳು ನಿರಂತರವಾಗಿ ಹೆಚ್ಚುತ್ತಿವೆ.
ಗ್ರೀಕ್ ದ್ವೀಪಗಳಿಗೆ ತಲುಪುವ ಪ್ರಯತ್ನದಲ್ಲಿ ಈ ತಿಂಗಳು ಶುಕ್ರವಾರದವರೆಗೆ 218 ಮಂದಿ ಏಜಿಯನ್ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ ತಿಳಿಸಿದೆ.
ಕರಗುತ್ತಿರುವ ಸಹಾನುಭೂತಿ
ವಲಸಿಗರ ಸಾವುಗಳು ಹೆಚ್ಚುತ್ತಿರುವಂತೆಯೇ, ಅವರ ಕುರಿತ ಸಹಾನುಭೂತಿಯೂ ಕರಗುತ್ತಿರುವಂತೆ ಅನಿಸುತ್ತಿದೆ. ಒಮ್ಮೆ, ತನ್ನ ದೇಶದ ಗಡಿಗಳನ್ನು ವಲಸಿಗರಿಗಾಗಿ ತೆರೆದು ಹೀರೋ ಎನಿಸಿಕೊಂಡಿದ್ದ ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್, ವಲಸಿಗರ ನಿರಂತರ ಪ್ರವಾಹವನ್ನುನಿಲ್ಲಿಸಬೇಕೆನ್ನುವ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಒಂದು ದಿನ ತಮ್ಮ ಸ್ವದೇಶಕ್ಕೆ ವಾಪಸಾಗಬೇಕು ಎನ್ನವುದನ್ನು ವಲಸಿಗರು ತಿಳಿದುಕೊಳ್ಳಬೇಕು ಎಂದು ಶನಿವಾರ ಅವರು ಹೇಳಿದ್ದಾರೆ.
ಗ್ರೀಸ್ ಮತ್ತು ಟರ್ಕಿ ನಡುವಿನ ಅಪಾಯಕಾರಿ ಪ್ರಯಾಣವನ್ನು ಕೈಗೊಳ್ಳುವವರಿಗೆ ಜನವರಿ ಈವರೆಗಿನ ಭಯಾನಕ ತಿಂಗಳಾಗಿದೆ.
- ಮಾನವ ಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ನ ಪದಾಧಿಕಾರಿ







