ಕಳಸಾ-ಬಂಡೂರಿ ನಾಲೆ ಯೋಜನೆ; ಸಿದ್ದರಾಮಯ್ಯ ಗೋವಾ ಸಿಎಂ ಜೊತೆ ಚರ್ಚಿಸಲಿ: ಡಿ.ವಿ.ಸದಾನಂದಗೌಡ

ಬೆಂಗಳೂರು, ಜ. 31: ಕಳಸಾ-ಬಂಡೂರಿ ನಾಲೆ ಯೋಜನೆ ಅನುಷ್ಠಾನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಗೋವಾ ಸಿಎಂ ಜತೆ ಸಮಾಲೋಚನೆ ನಡೆಸಿ, ಆ ಬಳಿಕ ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಲಿ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.
ರವಿವಾರ ಇಲ್ಲಿನ ಹೆಬ್ಬಾಳ ಕ್ಷೇತ್ರದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಪರ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಸಂಬಂಧ ಕೇಂದ್ರ ಸಚಿವೆ ಉಮಾ ಭಾರತಿಯವರ ಪತ್ರವನ್ನು ಮುಂದಿಟ್ಟುಕೊಂಡು ಕೇಂದ್ರದ ವಿರುದ್ಧ ಆರೋಪ ಸರಿಯಲ್ಲ ಎಂದು ಆಕ್ಷೇಪಿಸಿದರು.
ಎಲ್ಲ ವಿಚಾರಗಳಿಗೂ ಸಿಎಂ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರಕಾರ, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕೆಂದ ಅವರು, ಮಹದಾಯಿ ವಿವಾದವನ್ನು ಬಗೆಹರಿಸಲು ನರೇಂದ್ರ ಮೋದಿ ಪ್ರಾಮಾಣಿಕ ಪ್ರಯತ್ನ ಮಾಡಿ ದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಪ್ರಧಾನಿ ಮೋದಿ ಈ ವಿಚಾರ ಸಂಬಂಧ ಎರಡು ಬಾರಿ ಸರ್ವಪಕ್ಷ ನಿಯೋಗ ಸಭೆ ಕರೆದಿದ್ದು, ಈ ವೇಳೆ ರಾಜ್ಯ ಸರಕಾರದ ನಿಲುವನ್ನು ಸ್ಪಷ್ಟಪಡಿಸದೆ, ಆ ಸಂದರ್ಭದಲ್ಲಿ ಮೌನವಾಗಿ ಕುಳಿತಿದ್ದ ಸಿಎಂ ಸಿದ್ದರಾಮಯ್ಯ, ಹೊರಗೆ ಬಂದು ಪ್ರಧಾನಿ ಹಾಗೂ ಕೇಂದ್ರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಅವರು ಟೀಕಿಸಿದರು.
ಕೇವಲ ಒಂದು ಪತ್ರಕ್ಕೆ ಇಷ್ಟೊಂದು ಬೊಬ್ಬೆ ಹಾಕುತ್ತಿರುವ ಕಾಂಗ್ರೆಸ್ ಮುಖಂಡರು ಈ ಹಿಂದೆ ಕೇಂದ್ರದಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಎಷ್ಟು ಅನ್ಯಾಯ ವಾಗಿದೆ ಎಂಬುದನ್ನು ಮೊದಲು ನೋಡಿಕೊಳ್ಳಲಿ ಎಂದು ಸದಾನಂದಗೌಡ ವಾಗ್ದಾಳಿ ನಡೆಸಿದರು.





