ಆಟೊ ಪರವಾನಿಗೆಗೆ ಶಿಕ್ಷಣ ಕಡ್ಡಾಯ ಸಲ್ಲ: ಅರವಿಂದ್ ಕೇಜ್ರಿವಾಲ್

ಬೆಂಗಳೂರು, ಜ.31: ಆಟೊರಿಕ್ಷಾ ಚಾಲಕರು ಚಾಲನಾ ಪರವಾನಿಗೆ ಪಡೆಯಲು ಕಡ್ಡಾಯವಾಗಿ 8ನೆ ತರಗತಿ ಉತ್ತೀಣರಾಗಿರಬೇಕೆಂಬ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವುದು ಸರಿಯಲ್ಲ ಎಂದು ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಕ್ಷೇಪಿಸಿದ್ದಾರೆ.
ರವಿವಾರ ನಗರದ ಸಂತ ಜೋಸೆಫರ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಆಯೋಜಿಸಿದ್ದ ಆಟೊರಿಕ್ಷಾ ಚಾಲಕರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಲಕ್ಷಾಂತರ ಜನರು ಆಟೊರಿಕ್ಷಾ ಚಲಾಯಿಸಿ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಬೆಂಗಳೂರು ನಗರಯೊಂದರಲ್ಲೇ ಎರಡು ಲಕ್ಷ ಕುಟುಂಬಗಳು ಆಟೊರಿಕ್ಷಾಗಳ ಮೇಲೆ ಜೀವನ ನಿರ್ವಹಣೆ ಮಾಡುತ್ತಿವೆ. ಈಗ ಕೇಂದ್ರ ಸರಕಾರ ಅಸಾಂವಿಧಾನಿಕವಾಗಿ ಕಾನೂನನ್ನು ಜಾರಿಗೆ ತಂದಿದೆ. ಇದರಿಂದ, ಆಟೊಗಳನ್ನೆ ನಂಬಿದ್ದ ರಿಕ್ಷಾ ಚಾಲಕರು ಹಾಗೂ ಅವರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದ್ದು, ಈ ತಿದ್ದುಪಡಿ ಕಾನೂನನ್ನು ಕೇಂದ್ರ ಸರಕಾರ ವಾಪಸ್ ತೆಗೆದು ಕೊಳ್ಳಬೇಕೆಂದು ಅವರು ಒತ್ತಾಯಿಸಿದರು. ಆಟೊ ಚಾಲಕರು ಆಟೊಗಳನ್ನು ಸರಿಯಾಗಿ ಚಲಾಯಿಸು ತ್ತಿದ್ದರೂ ಪೊಲೀಸರು ಸಣ್ಣ ಪುಟ್ಟ ಕಾರಣಗಳನ್ನಯೊಡ್ಡಿ ಅವರ ಆಟೊಗಳನ್ನು ಸೀಜ್ ಮಾಡುವುದು, ದಂಡ ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೂ ಆಟೊ ಚಾಲಕರು ಇದನ್ನೆಲ್ಲ ಸಹಿಸಿಕೊಂಡು ಆಟೊಗಳನ್ನು ಓಡಿಸುತ್ತಿದ್ದರೂ ಕೇಂದ್ರ ಸರಕಾರ ಆಟೊ ಚಾಲಕರ ಸ್ವಾತಂತ್ರವನ್ನು ಕಿತ್ತುಕೊಳ್ಳುವುದಕ್ಕಾಗಿ ಈ ರೀತಿಯ ಕಠಿಣ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೊಸದಿಲ್ಲಿಯಲ್ಲಿ ಯಾರಾದರೂ ಅಧಿಕಾರಿಗಳು ಲಂಚದ ಬೇಡಿಕೆಯನ್ನಿಟ್ಟರೆ ತಕ್ಷಣ ತಮಗೆ ಅಥವಾ ತಮ್ಮ ಸಹೋದ್ಯೋಗಿ ಗಳಿಗೆ ದೂರವಾಣಿ ಕರೆ ಮಾಡಿದರೆ ತಕ್ಷಣ ಆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜೈಲಿಗೆ ಕಳುಹಿಸುತ್ತೇವೆ. ಆದರೆ, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಂಬರನ್ನು ಜನಸಾಮಾನ್ಯರಿಗೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರಲ್ಲದೆ, ಪ್ರಧಾನಿ ಮೋದಿ ಅವರು ಆರ್ಥಿಕ ವ್ಯವಹಾರದ ಬಗ್ಗೆ ಅದಾನಿ, ಅಂಬಾನಿ ಅವರ ಬಳಿ ತಿಳಿದುಕೊಳ್ಳುವುದಕ್ಕಿಂತಲೂ ನಮ್ಮ ದೇಶದ ರಿಕ್ಷಾ ಚಾಲಕರ ಬಳಿಯೇ ಆರ್ಥಿಕ ವ್ಯವಹಾರದ ಬಗ್ಗೆ ಪಾಠ ಮಾಡಿಸಿಕೊಳ್ಳಲಿ ಎಂದು ಕೇಜ್ರಿವಾಲ್ ಸಲಹೆ ಮಾಡಿದರು.
ಬಡತನ ಹಾಗೂ ನಿರುದ್ಯೋಗವನ್ನು ಹೊಗಲಾಡಿಸುವುದಕ್ಕಾಗಿ ರೋಜ್‌ಗಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ, ಇದೇ ಯೋಜನೆಯ ವಿರುದ್ಧವಾದಂತಹ ಕಾನೂನುಗಳನ್ನು ಪ್ರಸ್ತುತ ಕೇಂದ್ರ ಸರಕಾರ ಜಾರಿಗೆ ತರುತ್ತಿದ್ದು, ಇದರಿಂದ, ರೋಜ್‌ಗಾರ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳು ಜನರ ಆಕ್ರೋಶಕ್ಕೆ ಕಾರಣವಾಗುತ್ತವೆ ಎಂದು ಹೇಳಿದರು. ದಿಲ್ಲಿ ಸರಕಾರ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಸಾವಿರಾರು ಕೋಟಿ ರೂ. ಮೀಸಲಿಟ್ಟಿದೆ. ಆದರೆ, ದೇಶದ ಅಭಿವೃದ್ಧಿ, ಭ್ರಷ್ಟಾಚಾರಕ್ಕೆ ಕಡಿವಾಣ, ನಿರುದ್ಯೋಗದ ಸಮಸ್ಯೆಗಳನ್ನು ಹೊಗಲಾಡಿಸುತ್ತೇವೆಯೆಂದು ಭರವಸೆಯನ್ನು ನೀಡಿದ ಪಕ್ಷಗಳು ತಮ್ಮ ಆಶ್ವಾಸನೆಗಳನ್ನು ಮರೆತು ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಮಾತನಾಡಿ, ಆಟೊ ಚಾಲಕರು ಚಾಲನಾ ಪರವಾನಗಿ ಪಡೆಯಬೇಕಾದರೆ ಕಡ್ಡಾಯವಾಗಿ 8ನೆ ತರಗತಿಯನ್ನು ಪಾಸಾಗಿರಬೇಕೆಂಬ ಕಾನೂನನ್ನು 2007ರಲ್ಲಿಯೆ ಜಾರಿಗೆ ತಂದಿದ್ದರೂ ಈಗ ಕಾನೂನನ್ನು ಅಧಿಕೃತಗೊಳಿಸಿದ್ದಾರೆ ಎಂದು ಹೇಳಿದರು. ಸರಕಾರದಲ್ಲಿರುವವರು ಹಾಗೂ ಭೂಮಾಫಿಯಾದವರು ಸೇರಿಕೊಂಡು ಬೆಂಗಳೂರಿನ 8 ಸಾವಿರ ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಈ ಜಮೀನನ್ನು ಸರಕಾರ ವಶಪಡಿಸಿಕೊಂಡು ವಸತಿ ಇಲ್ಲದವರಿಗೆ ವಸತಿಯನ್ನು ನೀಡಿದರೆ ವಸತಿ ರಹಿತ ನಗರವಾಗುತ್ತದೆ ಎಂದು ಹೇಳಿದರು. ಸಹ ಸಂಚಾಲಕ ರವಿಕೃಷ್ಣಾರೆಡ್ಡಿ, ಆಮ್ ಆದ್ಮಿ ಪಕ್ಷದ ಮುಖಂಡರಾದ ವಿನೋದ್ ಜೇಮ್ಸ್, ಸಿದ್ಧಾರ್ಥ ಶರ್ಮ, ವಿಜಯಶರ್ಮ ಮತ್ತಿತರರು ಉಪಸ್ಥಿತರಿದ್ದರು.





