ಬ್ರಿಟನ್: 3,000 ವರ್ಷಗಳ ಹಿಂದಿನ ಕಂಚಿನ ಯುಗದ ವಸಾಹತು ಪತ್ತೆ
ಲಂಡನ್, ಜ. 31: ಸುಮಾರು 3,000 ವರ್ಷಗಳ ಹಿಂದಿನ ಕಂಚಿನ ಯುಗದ ವಸಾಹತೊಂದನ್ನು ಬ್ರಿಟನ್‌ನಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ. ಇದನ್ನು ಬ್ರಿಟನ್‌ನ ‘ಪಾಂಪೇ’ ಎಂಬುದಾಗಿ ಬಣ್ಣಿಸಲಾಗುತ್ತಿದೆ.
ಇಟಲಿಯ ಪುರಾತನ ನಗರ ಪಾಂಪೇ ಜ್ವಾಲಾಮುಖಿ ಸ್ಫೋಟಗೊಂಡಾಗ ಅದರಡಿಯಲ್ಲಿ ಹೂತು ಹೋಗಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕ್ಯಾಂಬ್ರಿಜ್‌ಶಯರ್‌ನಲ್ಲಿನ ‘ಮಸ್ಟ್ ಫಾರ್ಮ್’ ವಸಾಹತಿಗೆ ಬೆಂಕಿ ತಗುಲಿದಾಗ, ಅಲ್ಲಿನ ಮರದ ಮನೆಗಳು ಪಕ್ಕದ ನದಿಗೆ ಕುಸಿದು ಬಿದ್ದವು. ಬಳಿಕ ನದಿ ತಳದ ಕೆಸರಿನಲ್ಲಿ ಅವಶೇಷಗಳು ಶಾಶ್ವತವಾಗಿ ಉಳಿದವು. ಆ ವಸಾಹತಿನಲ್ಲಿದ್ದ ಕುಟುಂಬಗಳು ತಮ್ಮ ವಸ್ತುಗಳನ್ನು ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಂಡಿರಬಹುದು ಎಂಬುದಾಗಿ ಭಾವಿಸಲಾಗಿದೆ.
ಇವು ಪ್ರಾಚೀನ ಬ್ರಿಟನ್‌ನ ಅತ್ಯಂತ ಶ್ರೇಷ್ಠ ‘ಕಂಚಿನ ಯುಗದ ಮನೆಗಳು’ ಎಂಬುದಾಗಿ ಕ್ಯಾಂಬ್ರಿಜ್ ಪ್ರಾಚ್ಯ ಇಲಾಖೆಯ ತಂಡವೊಂದು ಬಣ್ಣಿಸಿದೆ.
‘ಮಸ್ಟ್ ಫಾರ್ಮ್’ನಲ್ಲಿನ ಆರು ವೃತ್ತಾಕಾರದ ಮನೆಗಳನ್ನು ಒಳಗೊಂಡ ವಸಾಹತನ್ನು ನದಿಯೊಂದರ ಕಾಲುವೆಯ ಮೇಲ್ಗಡೆ ಮರದ ಅಟ್ಟಣಿಗೆಗಳನ್ನು ಬಳಸಿ ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ.
ಪ್ರಾಚೀನ ಕಾಲದ ಬ್ರಿಟಿಷರು ವಾಸಿಸುತ್ತಿದ್ದ ಈ ಮನೆಗಳ ಮೇಲ್ಛಾವಣಿಯ ಮರಗಳನ್ನು ಹೊರತೆಗೆಯಲು ಸಂಶೋಧಕರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಕ್ಸಿನುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ. ಮನೆಯೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಮೇಲ್ಛಾವಣಿಯನ್ನು ಜಾಗರೂಕತೆಯಿಂದ ತೆರೆಯಲಾಗುವುದು.
ಮಸ್ಟ್ ಫಾರ್ಮ್‌ನಲ್ಲಿನ ಅಗೆತ ಈ ವಾರ ಅರ್ಧದಷ್ಟು ಮುಗಿದಿದೆ. ಈ ಅವಧಿಯಲ್ಲಿ ನೂರಾರು ವಸ್ತುಗಳನ್ನು ಪತ್ತೆಹಚ್ಚಲಾಗಿದೆ.
ಮನೆಗಳನ್ನೊಳಗೊಂಡ ವಸಾಹತನ್ನು ನದಿಯೊಂದರ ಕಾಲುವೆಯಲ್ಲಿ ಮರದ ಅಟ್ಟಣಿಗೆಗಳ ಮೇಲೆ ಕಟ್ಟಲಾಗಿದೆ. ಕಂಚಿನ ಯುಗದ ಕೊನೆಯ ವೇಳೆಗೆ ಈ ವಸಾಹತು ಅಸ್ತಿತ್ವದಲ್ಲಿದ್ದಿರಬಹುದು.-ಕಸಿಯ ಗಡನೀಕ್, ಕ್ಯಾಂಬ್ರಿಜ್‌ಶಯರ್ ಕೌಂಟಿ ಕೌನ್ಸಿಲ್‌ನ ಹಿರಿಯ ಪ್ರಾಕ್ತನ ಶಾಸ್ತ್ರಜ್ಞ