ಫೆಲೆಸ್ತೀನ್ ಶಾಂತಿ ಮಾತುಕತೆ ಆಹ್ವಾನ ಪರಿಶೀಲಿಸುವೆ: ಇಸ್ರೇಲ್
ಜೆರುಸಲೇಂ, ಜ.31: ಫೆಲೆಸ್ತೀನಿಯರೊಂದಿಗಿನ ಶಾಂತಿ ಮಾತುಕತೆಗೆ ಫ್ರಾನ್ಸ್ ನೀಡಿರುವ ಆಹ್ವಾನವನ್ನು ಇಸ್ರೇಲ್ ಪರಿಶೀಲಿಸುವುದು ಎಂದು ಇಸ್ರೇಲ್ ಸರಕಾರದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು. ಆದರೆ, ಮಾತುಕತೆಗಳು ವಿಫಲವಾದರೆ ಫೆಲೆಸ್ತೀನ್ ದೇಶವನ್ನು ಮಾನ್ಯ ಮಾಡುವುದಾಗಿ ಫ್ರಾನ್ಸ್ ಹೇಳಿರುವುದು ಸರಿಯಲ್ಲ ಎಂದು ಇಸ್ರೇಲ್ ಭಾವಿಸುತ್ತದೆ ಎಂದರು.
‘‘ಶಾಂತಿ ಮಾತುಕತೆಗೆ ನಮಗೆ ಆಹ್ವಾನ ಬಂದರೆ, ನಾವು ಅದನ್ನು ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇವೆ’’ ಎಂದು ಹೇಳಿಕೆಯೊಂದರಲ್ಲಿ ಅವರು ಹೇಳಿದರು.
‘‘ನಾವು ಏರ್ಪಡಿಸುತ್ತಿರುವ ಈ ಸಮ್ಮೇಳನ ವಿಫಲವಾದರೆ, ಫೆಲೆಸ್ತೀನ್ ದೇಶಕ್ಕೆ ಮಾನ್ಯತೆ ನೀಡುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ’’ ಎಂದು ಫ್ರಾನ್ಸ್ ವಿದೇಶ ಸಚಿವ ಲಾರಂಟ್ ಫೇಬಿಯಸ್ ಇತ್ತೀಚೆಗೆ ವಿದೇಶಿ ರಾಜತಾಂತ್ರಿಕರೊಂದಿಗೆ ಹೇಳಿದ್ದರು.
ಆದರೆ, ಇದನ್ನು ತಳ್ಳಿ ಹಾಕಿದ ಇಸ್ರೇಲ್ ವಕ್ತಾರ, ‘‘ಏನೂ ಪ್ರಗತಿ ಸಾಧಿಸದೆಯೇ ತಮಗೆ ಬೇಕಾದದ್ದು ಸಿಗಲಿದೆ ಎನ್ನುವುದು ಈಗಾಗಲೇ ಫೆಲೆಸ್ತೀನೀಯರಿಗೆ ತಿಳಿದರೆ ಅವರು ಸಮ್ಮೇಳನವನ್ನು ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ?’’ ಎಂದು ಪ್ರಶ್ನಿಸಿದರು.





