ಮುಷ್ಕರ ನಿರತರಿಂದ ತ್ಯಾಜ್ಯ ತೆರವಿಗೆ ಅಡ್ಡ
ದಿಲ್ಲಿ ಪೌರಕಾರ್ಮಿಕರ ಮುಷ್ಕರ ಐದನೆ ದಿನಕ್ಕೆ
ಹೊಸದಿಲ್ಲಿ,ಜ.31: ದಿಲ್ಲಿಯ ಮೂರು ನಗರಪಾಲಿಕೆಗಳ ನೈರ್ಮಲ್ಯ ಕಾರ್ಮಿಕರ ಮುಷ್ಕರ ರವಿವಾರ ಐದನೆ ದಿನಕ್ಕೆ ಕಾಲಿಟ್ಟಿದ್ದು, ರಸ್ತೆಗಳಲ್ಲಿ ಕೊಳೆತುನಾರುತ್ತಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಆಮ್ ಆದ್ಮಿ ಸರಕಾರ ನಿಯೋಜಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಮಿಕರನ್ನು ಮುಷ್ಕರ ನಿರತರು ಅಡ್ಡಿಪಡಿಸಿದ ಘಟನೆ ನಡೆದಿದೆ.
ಪೂರ್ವ ದಿಲ್ಲಿಯ ಪಥ್‌ಪರ್‌ಗಂಜ್‌ಗೆ ಪ್ರದೇಶಕ್ಕೆ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ರವಿವಾರ ಬೆಳಗ್ಗೆ ಭೇಟಿ ನೀಡಿದರು ಹಾಗೂ ಅಲ್ಲಿ ರಾಶಿಬಿದ್ದಿದ್ದ ತ್ಯಾಜ್ಯಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಮಿಕರಿಗೆ ತಿಳಿಸಿದರು.ಅವರು ಸ್ಥಳದಿಂದ ನಿರ್ಗಮಿಸುತ್ತಿದ್ದಂತೆಯೇ, ದಿಲ್ಲಿ ಮಹಾನಗರ ಪಾಲಿಕೆಯ ಕಾರ್ಮಿಕರು ಘೋಷಣೆಗಳನ್ನು ಕೂಗುತ್ತಾ, ಪಿಡಬ್ಲುಡಿ ಸಿಬ್ಬಂದಿಗೆ ಅಡ್ಡಿಪಡಿಸಿದರು. ಪಥ್‌ಪರ್‌ಗಂಜ್ ಸಿಸೋಡಿಯಾ ಅವರ ಸ್ವಕ್ಷೇತ್ರವಾಗಿದೆ.
ಈ ಮಧ್ಯೆ ಎಎಪಿಯ ಹಲವು ಸಚಿವರು ಹಾಗೂ ಶಾಸಕರು, ತಮ್ಮ ಕ್ಷೇತ್ರಗಳಲ್ಲಿ ನಡೆದ ಸ್ವಚ್ಛತಾ ಅಭಿಯಾನಗಳಲ್ಲಿ ಪಾಲ್ಗೊಂಡರು. ಮನೀಷ್ ಸಿಸೋಡಿಯಾ, ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ, ದಿಲ್ಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ತಮ್ಮ ಸ್ವಕ್ಷೇತ್ರಗಳಲ್ಲಿ ತ್ಯಾಜ್ಯಗಳ ತೆರವುಗೊಳಿಸುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಮುಷ್ಕರ ನಿರತ ದಿಲ್ಲಿ ಮಹಾನಗರಪಾಲಿಕೆ (ಎಂಸಿಡಿ)ನೌಕರರ ಬೇಡಿಕೆಗಳನ್ನು ತಾನು ಬೆಂಬಲಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ‘‘ ತಮಗೆ ಪೂರ್ಣವೇತನ ದೊರೆಯಬೇಕೆಂಬ ಎಂಸಿಡಿ ನೌಕರರ ಬೇಡಿಕೆಗೆ ನನ್ನ ಬೆಂಬಲವಿದೆ. ಹೈಕೋರ್ಟ್‌ನಲ್ಲಿ ಸೋಮವಾರ ಈ ಬಗ್ಗೆ ಅಲಿಕೆ ನಡೆಯಲಿದ್ದು, ಬಿಕ್ಕಟ್ಟು ಇತ್ಯರ್ಥಗೊಳ್ಳುವುದೆಂಬ ವಿಶ್ವಾಸ ತನಗಿದೆಯೆಂದು ಅವರು ಟ್ವೀಟ್ ಮಾಡಿದ್ದಾರೆ. ತ್ಯಾಜ್ಯಗಳನ್ನು ತೆರವುಗೊಳಿಸಲು ಪಿಡಬ್ಲುಡಿ ನೌಕರರು ರಾತ್ರಿಯಿಡೀ ಶ್ರಮಿಸಿದ್ದಾರೆ. ಅವರಿಗೆ ಎಲ್ಲಾ ಎಎಪಿ ಕಾರ್ಯಕರ್ತರು ನೆರವಾಗಬೇಕೆಂದು ಕೇಜ್ರಿವಾಲ್ ಕರೆ ನೀಡಿದ್ದಾರೆ. ದಿಲ್ಲಿ ಮಹಾನಗರ ಪಾಲಿಕೆಯನ್ನು 2012ರ ಮೇನಲ್ಲಿ ಮೂರು ಘಟಕಗಳಾಗಿ ವಿಭಜಿಸಲಾಗಿತ್ತು. ಈ ಮೂರು ನಗರಪಾಲಿಕೆ ಗಳಲ್ಲೂ ಬಿಜೆಪಿಯ ಆಡಳಿತವಿದೆ. ಆಮ್ ಆದ್ಮಿ ಪಕ್ಷದ ನಿಯಂತ್ರಣದಲ್ಲಿರುವ ದಿಲ್ಲಿ ಸರಕಾರವು, ನಗರಪಾಲಿಕೆಗಳಿಗೆ ಅನುದಾನ ಬಿಡುಗಡೆಗೊಳಿಸದಿರುವುದೇ ಪ್ರಸಕ್ತ ಬಿಕ್ಕಟ್ಟಿಗೆ ಕಾರಣವೆಂದು ಬಿಜೆಪಿ ಆರೋಪಿಸಿದೆ.
ಆದರೆ ದಿಲ್ಲಿಯ ಆಮ್‌ಆದ್ಮಿ ಸರಕಾರ ಈ ಆರೋಪವನ್ನು ನಿರಾಕರಿಸಿದೆ. ದಿಲ್ಲಿ ಸರಕಾರದ ಸಚಿವರ ನಿವಾಸ ಹಾಗೂ ಕಚೇರಿಗಳ ಮುಂದೆ ತ್ಯಾಜ್ಯಗಳನ್ನು ಎಸೆಯುವಂತೆ ಬಿಜೆಪಿ ಸರಕಾರವು, ಪೌರಕಾರ್ಮಿಕರಿಗೆ ಕುಮ್ಮಕ್ಕು ನೀಡುತ್ತಿದೆಯೆಂದು ಆದು ಆರೋಪಿಸಿದೆ.





