ಆ್ಯಂಬುಲೆನ್ಸ್ ನಿರ್ವಹಣೆಯಲ್ಲಿ ಲೋಪವೆಸಗಿದರೆ ಕ್ರಮ: ಸಚಿವ ಯು.ಟಿ.ಖಾದರ್ ಎಚ್ಚರಿಕೆ

ಬೆಂಗಳೂರು, ಜ.31: ರಾಜ್ಯದ ಜನತೆಗೆ ಆರೋಗ್ಯ ರಕ್ಷಣೆಗಾಗಿ ಪ್ರಾರಂಭವಾಗಿರುವ 108 ಆ್ಯಂಬುಲೆನ್ಸ್‌ಗಳ ನಿರ್ವಹಣೆಯಲ್ಲಿ ಲೋಪವೆಸಗಿದಲ್ಲಿ ಜಿವಿಕೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಸಮಾವೇಶಕ್ಕಾಗಿ ನಿರ್ಮಿಸುತ್ತಿರುವ ಸಭಾಂಗಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರತಿಭಟನೆ ನಡೆಸುತ್ತಿರುವ 108 ಆ್ಯಂಬುಲೆನ್ಸ್‌ಗಳ ನೌಕರರ ಬೇಡಿಕೆಗಳು ಸರಕಾರಕ್ಕೆ ಸಂಬಂಧವಿಲ್ಲ. ಈ ಸಂಬಂಧ ಈಗಾಗಲೇ ಸಮಸ್ಯೆ ಬಗೆಹರಿಸುವಂತೆ ಜಿವಿಕೆ ಸಂಸ್ಥೆಗೂ ಸೂಚನೆ ನೀಡಲಾಗಿದೆ. ಎಸ್ಮಾ ಜಾರಿ ಹಿನ್ನೆಲೆಯಲ್ಲಿ ಹೊಸ ನೌಕರರ ನೇಮಕವನ್ನು ಇನ್ನೊಂದು ವಾರದಲ್ಲಿ ಮಾಡಿಕೊಳ್ಳಲು ಜಿವಿಕೆ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಈಗಾಗಲೇ 113 ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ತಾಲೂಕುಗಳಿಗೂ ಮುಂದಿನ ದಿನಗಳಲ್ಲಿ ವಿಸ್ತರಣೆ ಮಾಡಲಾಗುವುದು. ದಕ್ಷಿಣ ಕನ್ನಡ ಹಾಗೂ ಗದಗ ಜಿಲ್ಲೆಗಳಲ್ಲಿ 50 ಹಾಸಿಗೆಗಳುಳ್ಳ ಆಯುರ್ವೇದ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗಳನ್ನು ಒಟ್ಟಾಗಿ ನೀಡುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಸಮಾವೇಶ: ಭಾರತದ ಆಯುಷ್ ಪದ್ದತಿಯನ್ನು ವಿಶ್ವ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಫೆ.26 ರಿಂದ ಮೂರುದಿನಗಳ ಕಾಲ ಗ್ಲೋಬಲ್ ವೆಲ್‌ನೆಸ್ ಮೀಟ್ 2016 ಜಾಗತಿಕ ಸಮಾವೇಶ ಹಮ್ಮಿಕೊಂಡಿರುವುದಾಗಿ ಆರೋಗ್ಯ ಸಚಿವರು ತಿಳಿಸಿದರು.
ಕರ್ನಾಟಕ ಆಯುರ್ವೇದ ಯುನಾನಿ ವೈದ್ಯ ಮಂಡಳಿಯ ಸವರ್ಣ ಮಹೋತ್ಸವದ ಅಂಗವಾಗಿ ಈ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ದೇಶದ ಎಲ್ಲ ರಾಜ್ಯಗಳು ಸೇರಿದಂತೆ ವಿಶ್ವದ ಇತರ ದೇಶಗಳಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸಲಿದ್ದಾರೆ. ಅಲ್ಲದೆ, ಐದು ಲಕ್ಷಕ್ಕೂ ಹೆಚ್ಚು ಜನ ಸಾಮಾನ್ಯರಿಗೆ ಯೋಗಾ ಮತ್ತು ಅಲೋಪತಿಯ ಬಗ್ಗೆ ಅರಿವು ಮೂಡಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಆಯುಷ್ ಅರೋಗ್ಯ ಪದ್ಧತಿ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಆರು ಸಭಾಂಗಣಗಳಲ್ಲಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು. ಆಯುಷ್ ಆಹಾರ ಪದ್ಧತಿಗಳಿಗೆ ಸಂಬಂಧಿಸಿದಂತೆ ಸುಮಾರು 1000ಕ್ಕೂ ಹೆಚ್ಚು ಆಹಾರ ಪದಾರ್ಥಗಳ ಪ್ರದರ್ಶನ ಮಾಡಲಾಗುವುದು. ಜೊತೆಗೆ, ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಮತ್ತು ಯೋಗಾಭ್ಯಾಸ ಕಾರ್ಯಕ್ರಮವನ್ನು ಆನಂದ ಗುರೂಜಿ ನೇತೃತ್ವದಲ್ಲಿ ಆರೋಗ್ಯ, ಔಷದ ಮತ್ತು ಜ್ಞಾನವನ್ನು ಮುಖ್ಯ ಉದ್ದೇಶವನ್ನು ಗುರಿಯಾಗಿಸಿಕೊಂಡು ಫೆ. 14 ರಂದು ಆರೋಗ್ಯಾಥಾನ್ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, 108 ಅಡಿ ಎತ್ತರದ ಧನ್ವಂತರಿ ವಿಷ್ಣು ಮೂರ್ತಿ ನಿರ್ಮಿಸುವುದಾಗಿ ಅವರು ತಿಳಿಸಿದರು.





