ರೋಹಿತ್ ವೇಮುಲಾ ದಲಿತನಲ್ಲ: ಸುಷ್ಮಾ ಸ್ವರಾಜ್
ಹೈದರಾಬಾದ್,ಜ.31: ಆತ್ಮಹತ್ಯೆ ಮಾಡಿಕೊಂಡಿರುವ ಹೈದರಾಬಾದ್ ಕೇಂದ್ರೀಯ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತನಾಗಿರಲಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ಥಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಪ್ರಕರಣದ ವಾಸ್ತವಾಂಶಗಳು ಹೊರಗೆ ಬಂದಿದ್ದು,ತನಗೆ ತಿಳಿದಿರುವಂತೆ ವೇಮುಲಾ ದಲಿತನಾಗಿರಲಿಲ್ಲ. ಆತನ ಜಾತಿಯ ಕುರಿತು ವಿವಾದವು ಆಧಾರ ರಹಿತವಾಗಿದೆ ಎಂದು ಹೇಳಿದರು.
ವೇಮುಲಾ ಪರಿಶಿಷ್ಟ ಜಾತಿ ಅಥವಾ ದಲಿತ ಸಮುದಾಯದ ಪಟ್ಟಿಯಲ್ಲಿರುವ ಮಾಳ ಸಮುದಾಯಕ್ಕೆ ಸೇರಿದವನು ಎಂದು ಆಂಧ್ರ ಪ್ರದೇಶದ ಕಂದಾಯ ಇಲಾಖೆಯ ಪ್ರಮಾಣ ಪತ್ರವು ತೋರಿಸುತ್ತಿದೆ. ಆದರೆ ಆತನ ತಂದೆಯ ತಾಯಿ, ತಮ್ಮ ಕುಟುಂಬವು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ವಡ್ಡ ಸಮುದಾಯದ್ದಾಗಿದೆ ಎಂದು ಹೇಳಿದ್ದಾರೆ.
ತಾನು ದಲಿತ ಮಾಳ ಸಮುದಾಯಕ್ಕೆ ಸೇರಿದ್ದು,ತನ್ನ ಪತಿ ವಡ್ಡ ಜಾತಿಯವರಾಗಿದ್ದಾರೆ. ರೋಹಿತ್ ತನ್ನನ್ನು ದಲಿತನೆಂದು ಗುರುತಿಸಿಕೊಂಡಿದ್ದ. ಮೂರನೇ ಮಗು ನನ್ನ ಗರ್ಭದಲ್ಲಿರುವಾಗಲೇ ರೋಹಿತನ ತಂದೆ ನಮ್ಮನ್ನು ಬಿಟ್ಟು ಹೋಗಿದ್ದರು. ಮಕ್ಕಳನ್ನು ನಾನೇ ಬೆಳೆಸಿದ್ದು, ಅವರನ್ನು ದಲಿತರೆಂದೇ ದಾಖಲಿಸಿದ್ದೇನೆ ಎಂದು ವೇಮುಲಾರ ತಾಯಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.





