ಬಡವರಿಗೆ ಕಾನೂನುಸೇವೆ 148 ಕೋ.ರೂ. ಅನುದಾನ
ಹೊಸದಿಲ್ಲಿ,ಜ.31: ಕಾನೂನು ಸೇವೆಗಳನ್ನು ಪಡೆಯಲು ಆರ್ಥಿಕ ಶಕ್ತಿಯಿಲ್ಲದವರಿಗೆ ನೆರವಾಗಲು, ಕೇಂದ್ರ ಸರಕಾರವು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 148 ಕೋಟಿ ರೂ. ನೀಡಲಿದೆಯೆಂದು, ಕಾನೂನು ಮತ್ತು ನ್ಯಾಯಾಂಗ ಕುರಿತ ಸಂಸದೀಯ ಸಮಿತಿಯು ತಿಳಿಸಿದೆ.
ಸಿಬ್ಬಂದಿ, ಸಾರ್ವಜನಿಕ ಅಹವಾಲುಗಳು, ಕಾನೂನು ಮತ್ತು ನ್ಯಾಯ ಇಲಾಖೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ಇ.ಎಂ. ಸುದರ್ಶನ್, ರವಿವಾರ ಮಹಾರಾಷ್ಟ್ರದ ನಾಗಪುರ ಕೇಂದ್ರೀಯ ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರಿಗೆ ಈ ವಿಷಯವನ್ನು ತಿಳಿಸಿದರು.
ದೇಶಾದ್ಯಂತದ ಜೈಲುಗಳಲ್ಲಿ ಕಾನೂನು ನೆರವಿನ ನಿಯಮಾವಳಿಗಳ ಜಾರಿ ಕುರಿತ ವರದಿಯೊಂದನ್ನು ಸಮಿತಿಯು ಸಿದ್ಧಪಡಿಸಲಿದೆಯೆಂದು ಅವರು ಹೇಳಿದರು. ಸಮಿತಿಯ ಸದಸ್ಯರು ನಾಗಪುರ ಜೈಲಿನಲ್ಲಿನ ಕೆಲವು ಕೈದಿಗಳೊಂದಿಗೆ ಮಾತನಾಡಿ, ಅವರಿಗೆ ಲಭಿಸುತ್ತಿರುವ ಕಾನೂನು ನೆರವಿನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರೆಂದು ನಾಚಿಯಪ್ಪನ್ ತಿಳಿಸಿದರು. ಸಮಿತಿಯು ಶೀಘ್ರದಲ್ಲಿಯೇ ದಿಲ್ಲಿಯ ತಿಹಾರ್ ಜೈಲಿಗೂ ಭೇಟಿ ನೀಡಲಿದೆಯೆಂದರು.
ಸಮಿತಿಯ ಉಳಿದ ಸದಸ್ಯರು ನ್ಯಾಯವಾದಿಗಳಾದ ಕೆ.ಟಿ.ಎಸ್. ತುಳಸಿ, ಜಾಯ್ಸಾ ಜಾರ್ಜ್ ಹಾಗೂ ವರಪ್ರಸಾದ್ ರಾವ್ ವೆಳಗಪಲ್ಲಿ ಕೂಡಾ ನಿಯೋಗದಲ್ಲಿದ್ದರು.





