ಗಾಂಧಿ ಸಾವಿಗೆ ಸಂಭ್ರಮಿಸಿದ ದೇಶದ್ರೋಹಿಗಳು!
ಮಹಾತ್ಮಗಾಂಧೀಜಿಯವರನ್ನು ಕೊಂದ ಸುದ್ದಿ ಕೇಳಿ ಕೆಲವು ಆರೆಸ್ಸೆಸ್ ಕಚೇರಿಗಳಲ್ಲಿ ಸಿಹಿಯನ್ನು ಹಂಚಲಾಯಿತಂತೆ. ಇದು ಆ ಸಂದರ್ಭದಲ್ಲಿ ಕೆಲವು ಪತ್ರಿಕೆಗಳಲ್ಲೂ ಪ್ರಕಟವಾಗಿದ್ದ. ಸಾದಾತ್ ಹಸನ್ ಮಂಟೋ ಅವರು ಈ ಘಟನೆಯನ್ನು ಒಂದು ವಿಡಂಬನಾ ಕತೆಯಾಗಿ ಬರೆದಿದ್ದಾರೆ. ಗಾಂಧಿ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಎಷ್ಟೇ ಹೇಳಿಕೊಂಡರೂ ಅದರೊಳಗಿದ್ದ ಹಲವು ನಾಯಕರು ಅಂದು ಸಂಚಿನಲ್ಲಿ ಪಾಲುದಾರರಾಗಿದ್ದರು ಎನ್ನುವುದು ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿದೆ. ಗಾಂಧಿಯನ್ನು ಕೊಂದ ರಕ್ತದ ಕಳಂಕ ಇಂದಿಗೂ ಆರೆಸ್ಸೆಸ್‌ನ್ನು ಬಿಡದೆ ಕಾಡುತ್ತಿದೆ. ರಾಮನನ್ನು ಮುಂದಿಟ್ಟು ರಾಜಕೀಯ ಆಡುವವರಿಗೆ ಶ್ರೀರಾಮನ ಪರಮ ಭಕ್ತ ಮಹಾತ್ಮಗಾಂಧೀಜಿ ಇಂದಿಗೂ ಬೆಂಬಿಡದ ಭೂತವಾಗಿದ್ದಾರೆ. ಶ್ರೀರಾಮನೆನ್ನುವುದು ಗಾಂಧೀಜಿಗೆ ವೌಲ್ಯವಾಗಿತ್ತು. ಸತ್ಯ, ವಚನಬದ್ಧತೆ ಮೊದಲಾದ ಆದರ್ಶಗಳಿಗೆ ಅವರು ರಾಮನನ್ನು ಆವಾಹಿಸಿಕೊಂಡಿದ್ದರು. ಅವರ ರಾಮ ಗುಡಿಯಲ್ಲಿರಲಿಲ್ಲ. ಬೀದಿಯಲ್ಲಿದ್ದ. ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಅವರು ರಾಮನಿಗೆ ಹತ್ತಿರವಾಗಿದ್ದರು. ತಮ್ಮ ಬದುಕಿನುದ್ದಕ್ಕೂ ಅಸ್ಪಶ್ಯತೆಯ ವಿರುದ್ಧ ಹೋರಾಡಿದ ಗಾಂಧೀಜಿಗೆ ರಾಮನಿಗೊಂದು ಗುಡಿ ಕಟ್ಟುವ ಅಗತ್ಯ ಬಿದ್ದಿರಲಿಲ್ಲ. ಆರೆಸ್ಸೆಸ್‌ನ ಉತ್ಪನ್ನವಾಗಿರುವ ನಾಥೂರಾಂ ಗೋಡ್ಸೆ ಗಾಂಧೀಜಿಗೆ ಗುಂಡಿಕ್ಕುವ ಮೂಲಕ ಕೊಲ್ಲಲು ಹೊರಟದ್ದು ರಾಮನ ಆದರ್ಶವನ್ನು. ಆತನ ವೌಲ್ಯಗಳನ್ನು. ರಾಮನನ್ನು ಕೊಂದವರೇ ಇದೀಗ ರಾಮನಿಗೆ ಮಂದಿರ ಕಟ್ಟಲು ಹೊರಟಿದ್ದಾರೆ. ರಾಮನ ವೌಲ್ಯಗಳನ್ನು ಕೊಂದಾತನನ್ನು ಸಾರ್ವಜನಿಕವಾಗಿ ಮಹಾತ್ಮನೆಂದು ಬಿಂಬಿಸಲು ಹೊರಟಿದ್ದಾರೆ.
ರಾಮನನ್ನು ಕೊಂದು ಹಾಕಿದ ಜನರು ಈ ದೇಶದಲ್ಲಿ ಇನ್ನಷ್ಟು ಆಳವಾಗಿ ಬೇರು ಬಿಟ್ಟಿದ್ದಾರೆ ಎನ್ನುವುದಕ್ಕೆ ಶನಿವಾರದಂದು ಕೆಲವು ಸಂಘಟನೆಗಳು ಪ್ರದರ್ಶಿಸಿದ ಕ್ರೌರ್ಯಗಳೇ ಸಾಕ್ಷಿ. ಮಹಾತ್ಮಾ ಗಾಂಧಿಯನ್ನು ಕೊಂದು ಹಾಕಿದ ದಿನದಂದು ಅಖಿಲ ಭಾರತ ಹಿಂದೂ ಮಹಾಸಭಾ ಸಂಘಟನೆ ಸಿಹಿ ಹಂಚಿ ಸಂಭ್ರಮಿಸಿದೆ. ಅಷ್ಟೇ ಅಲ್ಲ ಸಾರ್ವಜನಿಕವಾಗಿ, ನೃತ್ಯ ಹಾಡುಗಳ ಜೊತೆಗೆ ಅವರು ಖುಷಿ ಹಂಚಿಕೊಂಡಿದ್ದಾರೆ. ಯಾವುದೇ ಸಾವನ್ನು ಸಂಭ್ರಮಿಸುವವರನ್ನು, ಸಿಹಿ ಹಂಚಿ ಖುಷಿ ಪಡುವವರನ್ನು ಮನುಷ್ಯರು ಎಂದು ಗುರುತಿಸುವುದು ಕಷ್ಟ. ಇವರು ಸಮಾಜ ಘಾತುಕರ ಸಾಲಲ್ಲಿ ನಿಲ್ಲುತ್ತಾರೆ. ವಿಪರ್ಯಾಸವೆಂದರೆ, ಇವರು ತಮ್ಮನ್ನು ತಾವು ಹಿಂದೂ ಕಾರ್ಯಕರ್ತರು ಎಂದು ಘೋಷಿಸಿಕೊಳ್ಳುವ ಮೂಲಕ ಸ್ವತಃ ಹಿಂದೂಧರ್ಮಕ್ಕೂ ಅವಮಾನ ಮಾಡಿದ್ದಾರೆ. ಮನುಷ್ಯವರ್ಗದಲ್ಲೇ ಗುರುತಿಸಲು ಅನರ್ಹವಾದವರನ್ನು ಹಿಂದೂಧರ್ಮದ ಮೂಲಕ ಗುರುತಿಸಲು ಸಾಧ್ಯವೇ? ಒಂದು ರೀತಿಯಲ್ಲಿ ಇವರು ಹಿಂದೂ ಧರ್ಮದ ಕಾರ್ಯಕರ್ತರು ಎನ್ನುವುದಕ್ಕಿಂತ, ಒಳಗಿಂದೊಳಗೇ ಹಿಂದೂ ಧರ್ಮದ ವಿರುದ್ಧ ಸಂಚು ನಡೆಸುತ್ತಿದ್ದಾರೆ. ಹಿಂದೂ ಧರ್ಮದ ವೌಲ್ಯಗಳನ್ನು, ಆದರ್ಶಗಳನ್ನು ಕಾಲಲ್ಲಿ ತುಳಿಯುತ್ತಾ, ತಮ್ಮನ್ನು ತಾವು ಹಿಂದೂ ಧರ್ಮೀಯರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನಷ್ಟು ವಿಷಾದನೀಯ ಸಂಗತಿಯೆಂದರೆ, ಕೊಲೆಗಡುಕ ನಾಥೂರಾಂ ಗೋಡ್ಸೆಗೆ ದೇವಾಲಯವನ್ನು ನಿರ್ಮಿಸಲು ಹೊರಟಿದ್ದಾರೆ. ಆ ಮೂಲಕ ಸಮಾಜದಲ್ಲಿ ಕೊಲೆಗಡುಕ ಧರ್ಮವೊಂದನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಅಸಂಖ್ಯ ಅಮಾಯಕರನ್ನು ರಕ್ಷಿಸಲು ಪ್ರಾಣವನ್ನೇ ಒತ್ತೆಯಿಟ್ಟ ಗಾಂಧಿಯನ್ನು ಕೊಂದ ನಾಥೂರಾಂಗೋಡ್ಸೆ ಇವರಿಗೆ ಯಾವ ರೀತಿಯಲ್ಲಿ ಆದರ್ಶ? ಆತನ ಯಾವ ಬದುಕು ಇವರನ್ನು ಸೆಳೆದಿದೆ? ಎಂದರೆ ಅವರಲ್ಲಿ ಉತ್ತರವಿಲ್ಲ. ಕೋಮುವಿಷದಿಂದ ಕಣ್ಣು, ಕಿವಿ, ಮೆದುಳು, ಹೃದಯ ಕಳೆದುಕೊಂಡಿರುವ ಇವರಿಗೆ, ಕೊಲೆಯೇ ಆದರ್ಶವಾಗಿದೆ.
ಇವರು ವಿರೋಧಿಸುತ್ತಿರುವುದು ಕೇವಲ ಗಾಂಧೀಜಿಯನ್ನು ಮಾತ್ರವಲ್ಲ, ಪ್ರಜಾಸತ್ತಾತ್ಮಕವಾದ ಸಂವಿಧಾನವನ್ನೇ ಇವರು ವಿರೋಧಿಸುತ್ತಿದ್ದಾರೆ. ಮತ್ತು ಅದನ್ನು ಸಾರ್ವಜನಿಕವಾಗಿ ಆಡಿದ್ದಾರೆ. ಕಾಶ್ಮೀರದ ಜನರು ಪ್ರತ್ಯೇಕ ಕಾಶ್ಮೀರವನ್ನು ಕೇಳಿದಾಗ ಅವರು ಪ್ರತ್ಯೇಕತಾವಾದಿಗಳು, ಉಗ್ರರಾಗಿ ಗುರುತಿಸಲ್ಪಡುತ್ತಾರೆ ಎಂದಾದರೆ, ಈ ಹಿಂದೂ ಸನಾತನವಾದಿಗಳೂ ಪ್ರತ್ಯೇಕತಾವಾದಿಗಳಾಗಿಯೇ ಗುರುತಿಸಲ್ಪಡುತ್ತಾರೆ. ಪ್ರತ್ಯೇಕ ಕಾಶ್ಮೀರವನ್ನು ಕೇಳುವ ಜನರಿಗೂ, ಪ್ರತ್ಯೇಕ ಹಿಂದೂರಾಷ್ಟ್ರವನ್ನು ಕೇಳುವ ಜನರಿಗೂ ಯಾವುದೇ ವ್ಯತ್ಯಾಸವಿಲ್ಲ. ಜೊತೆಗೆ ಇವರು ಅಂಬೇಡ್ಕರ್ ಸಂವಿಧಾನದ ಬದಲಿಗೆ, ಮನು ಸಂವಿಧಾನವನ್ನು ಜಾರಿಗೊಳಿಸಲು ಹೊರಟಿದ್ದಾರೆ. ಉಗ್ರವಾದಿ ನಾಥೂರಾಂಗೋಡ್ಸೆಯನ್ನು ತಮ್ಮ ನಾಯಕ ಎಂದು ಘೋಷಿಸಿಕೊಂಡಿದ್ದಾರೆ. ಅಫ್ಝಲ್ ಗುರುವನ್ನು ನಾಯಕನನ್ನಾಗಿಸಿಕೊಂಡವರಿಗೂ, ನಾಥೂರಾಂ ಗೋಡ್ಸೆಯನ್ನು ನಾಯಕನನ್ನಾಗಿಸಿಕೊಂಡವರಿಗೂ ವ್ಯತ್ಯಾಸವಿದೆಯೇ? ಇವರನ್ನು ದೇಶ ದ್ರೋಹಿಗಳು, ಉಗ್ರರು ಎಂದು ಕರೆಯುವುದಕ್ಕೆ ಸರಕಾರದ ಮುಂದಿರುವ ಅಡ್ಡಿಗಳಾದರೂ ಯಾವುದು?
ಇಂದು ಆತಂಕಕಾರಿ ಸಂಗತಿ, ಹಿಂದೂ ಮಹಾಸಭಾದ ಜನರು ಗಾಂಧಿಯ ಪುಣ್ಯ ತಿಥಿಯನ್ನು ಸಂಭ್ರಮಿಸಿದ್ದಲ್ಲ. ಬದಲಿಗೆ ಇವರು ಇಂತಹ ದೇಶದ್ರೋಹಿ ಕೃತ್ಯಗಳನ್ನು ಎಸಗಿದ್ದರೂ ಇವರ ವಿರುದ್ಧ ಕಾನೂನು ವೌನವಾಗಿರುವುದು. ಈ ವೌನ ಪರೋಕ್ಷವಾಗಿ ಇವರ ಕೃತ್ಯವನ್ನು ಸಮರ್ಥಿಸುತ್ತದೆ. ಇದು ಇವರಿಗೆ ಇನ್ನಷ್ಟು ಇಂತಹ ಕೃತ್ಯಗಳನ್ನು ಎಸಗಲು ಕುಮ್ಮಕ್ಕು ನೀಡುತ್ತದೆ. ಗಾಂಧೀಜಿಯ ಸಾವನ್ನು ಬಹಿರಂಗವಾಗಿ ಆಚರಿಸಿದವರ ಮೇಲೆ ಯಾವ ಕ್ರಮವೂ ಎಸಗದ ಕಾನೂನೇ ಸಂವಿಧಾನದ ಮುಂದೆ ಅತೀ ದೊಡ್ಡ ಅಪರಾಧಿ. ಇಂತಹ ದುರ್ಬಲ ಕಾನೂನುಗಳೇ ಇಂದು ದೇಶದಲ್ಲಿ ಉಗ್ರವಾದಿಗಳು, ಭಯೋತ್ಪಾದಕರು ಹೆಚ್ಚುವುದಕ್ಕೆ ಕಾರಣವಾಗಿವೆ. ಈ ಕಾರಣದಿಂದಲೇ, ಗಾಂಧೀಜಿಯ ಸಾವನ್ನು ಸಂಭ್ರಮಿಸಿದವರ ಮೇಲೆ ಯಾವ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವುದನ್ನು ಸರಕಾರ ಸ್ಪಷ್ಟಪಡಿಸಬೇಕಾಗಿದೆ. ಮುಖ್ಯವಾಗಿ ಎಲ್ಲರನ್ನೂ ದೇಶದ್ರೋಹದ ಕಾಯ್ದೆಯಡಿ ಬಂಧಿಸಬೇಕು. ಮತ್ತು ಅವರ ಹಿನ್ನೆಲೆಗಳ ಕುರಿತಂತೆ ಕಣ್ಣಿಡಬೇಕು. ಅವರಿಗೆ ಯಾವ ಯಾವ ದೇಶದ್ರೋಹಿ ಸಂಘಟನೆಗಳ ಜೊತೆಗೆ ನಂಟಿದೆಯೋ ಅದರ ನಾಯಕರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಈ ದೇಶದಲ್ಲಿ ಗಾಂಧಿಗೆ ಒದಗಿದ ಸ್ಥಿತಿ ಅಂಬೇಡ್ಕರ್ ಅವರ ಸಂವಿಧಾನಕ್ಕೂ ಒದಗಿ ಬರಲು ಹೆಚ್ಚು ದಿನ ಬೇಕಿಲ್ಲ.
ಸಂವಿಧಾನವನ್ನೇ ಇವರು ವಿರೋಧಿಸುತ್ತಿದ್ದಾರೆ. ಮತ್ತು ಅದನ್ನು ಸಾರ್ವಜನಿಕವಾಗಿ ಆಡಿದ್ದಾರೆ. ಕಾಶ್ಮೀರದ ಜನರು ಪ್ರತ್ಯೇಕ ಕಾಶ್ಮೀರವನ್ನು ಕೇಳಿದಾಗ ಅವರು ಪ್ರತ್ಯೇಕತಾವಾದಿಗಳು, ಉಗ್ರರಾಗಿ ಗುರುತಿಸಲ್ಪಡುತ್ತಾರೆ ಎಂದಾದರೆ, ಈ ಹಿಂದೂ ಸನಾತನವಾದಿಗಳೂ ಪ್ರತ್ಯೇಕತಾವಾದಿಗಳಾಗಿಯೇ ಗುರುತಿಸಲ್ಪಡುತ್ತಾರೆ. ಪ್ರತ್ಯೇಕ ಕಾಶ್ಮೀರವನ್ನು ಕೇಳುವ ಜನರಿಗೂ, ಪ್ರತ್ಯೇಕ ಹಿಂದೂರಾಷ್ಟ್ರವನ್ನು ಕೇಳುವ ಜನರಿಗೆ ಯಾವುದೇ ವ್ಯತ್ಯಾಸವಿಲ್ಲ.







