ಅಬ್ರಹಾಂ ಕರ್ಕಡ
ಸಿಪಿಎಂ ಮುಖಂಡ ಅಬ್ರಹಾಂ ಕರ್ಕಡ
ಮಂಗಳೂರು, ಜ. 31: ರೈತ ಹಾಗೂ ಗೇಣಿದಾರರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್)ದ ಮುಖಂಡ ಬಿಜೈ ನಿವಾಸಿ ಅಬ್ರಹಾಂ ಕರ್ಕಡ (81) ಅಲ್ಪಕಾಲದ ಅಸೌಖ್ಯದಿಂದ ಇಂದು ರಾತ್ರಿ ನಿಧನ ಹೊಂದಿದರು. ಮೃತರು ಮೂವರು ಪುತ್ರಿಯರ ಸಹಿತ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಕಳೆದ ಮೂರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳಿಂದ ಆಸ್ಪತ್ರೆಯ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ರಾತ್ರಿ 8 ಗಂಟೆಗೆ ಕೊನೆಯುಸಿರೆಳೆದರು.
ತಮ್ಮ ಎಳೆಯ ವಯಸ್ಸಿನಲ್ಲೇ ಕಮ್ಯುನಿಸ್ಟ್ ಪಾರ್ಟಿಯಲ್ಲಿ (ಸಿಪಿಎಂ) ಗುರುತಿಸಿಕೊಂಡಿದ್ದ ಅಬ್ರಹಾಂ ಕರ್ಕಡ, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಭೂ ಮಾಲಕರ ದೌರ್ಜ್ಯನ್ಯದ ವಿರುದ್ಧ ಹೋರಾಡಿ ಗೇಣಿದಾರರ ಪರವಾಗಿ ನಿಂತಿದ್ದರು. ಕುಂದಾಪುರ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಪಕ್ಷದಿಂದ ವಿಜಯಿಯಾಗಿ ಕುಂದಾಪುರ ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕಾರ್ಮಿಕ ಸಂಘಟನೆಗಳಲ್ಲಿ ಪ್ರಮುಖನಾಗಿ ಗುರುತಿಸಿಕೊಂಡಿದ್ದ ಅಬ್ರಹಾಂ ಕರ್ಕಡ, ಅವಿಭಜಿತ ದ.ಕ. ಜಿಲ್ಲಾ ಹಂಚಿನ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಅವಿಭಜಿತ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಸಹಕಾರಿ ಸಂಘಗಳ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. *ಅಂತ್ಯ ಕ್ರಿಯೆ: ಮೃತರ ಅಂತ್ಯ ಕ್ರಿಯೆಯು ಸೋಮವಾರ ಸಂಜೆ 4 ಗಂಟೆಗೆ ವೆಲೆನ್ಸಿಯಾ ಚರ್ಚ್ ಬಳಿಯ ಸ್ಮಶಾನದಲ್ಲಿ ನೆರವೇರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.







