ಸ್ವರಾಜ್ ಅಭಿಯಾನ ವ್ಯಕ್ತಿ ಕೇಂದ್ರಿತ ಸಂಘಟನೆಯಲ್ಲ: ಯಾದವ್

- ಸತ್ಯಾ
ಎನ್‌ಡಿಟಿವಿ, ದೂರದರ್ಶನ, ಸಿಎನ್‌ಎನ್- ಐಬಿಎನ್‌ನಂತಹ ರಾಷ್ಟ್ರೀಯ ವಾಹಿನಿಗಳಲ್ಲಿ ರಾಜಕೀಯ ವಿಶ್ಲೇಷಕರಾಗಿ ರಾಜಕಾರಣಿಗಳ ನಿದ್ದೆಗೆಡಿಸಿದ್ದ ನಿರೂಪಕ ಯೋಗೇಂದ್ರ ಸಿಂಗ್ ಯಾದವ್. ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಯೋಗೇಂದ್ರ ಸಿಂಗ್ ಯಾದವ್ ಚಾನೆಲ್‌ಗಳಲ್ಲಿ ರಾಜಕೀಯ ಭವಿಷ್ಯ ಹೇಳುವುದರಲ್ಲಿ ನಿಸ್ಸೀಮ ಎಂದೇ ಖ್ಯಾತಿ ಪಡೆದವರು. ಇದಾದ ಬಳಿಕ ಅರವಿಂದ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷಕ್ಕೆ ಸೇರಿ ಭ್ರಷ್ಟಾಚಾರದ ವಿರುದ್ಧ ಜನ್‌ಲೋಕಪಾಲ್ ಮಸೂದೆ ಜಾರಿಗಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡು, ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇರೆಗೆ ಪಕ್ಷದಿಂದ ಹೊರಬಂದರು. ಬಳಿಕ ಇದೀಗ ಅವರು ಪ್ರಶಾಂತ್ ಭೂಷಣ್ ಜೊತೆ ಸೇರಿ ಸ್ವರಾಜ್ ಅಭಿಯಾನದ ಮೂಲಕ ರೈತರ ಪರ ಹೋರಾಟ ನಡೆಸುತ್ತಿದ್ದಾರೆ.
ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದೇಶದ ಉದ್ದಗಲಕ್ಕೂ ಸಂಚರಿಸಿ ಸಂಚಲನ ಮೂಡಿಸುತ್ತಿರುವ ಯೋಗೇಂದ್ರ ಯಾದವ್, ಕರ್ನಾಟಕದಲ್ಲೂ ತಮ್ಮ ಚಳವಳಿಯ ಟೊಂಗೆಗಳನ್ನು ಹರಡಲು ತೀವ್ರ ತಯಾರಿ ನಡೆಸುತ್ತಿದ್ದಾರೆ. ರೈತರ ಸಮಸ್ಯೆ ಬಳಿಕ ಶಿಕ್ಷಾ ಸ್ವರಾಜ್ ಅಭಿಯಾನ, ಕಪ್ಪುಹಣದ ವಿರುದ್ಧ ಹೋರಾಟದ ಗುರಿ ಹೊಂದಿರುವ ಯೋಗೇಂದ್ರ ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ‘ವಾರ್ತಾಭಾರತಿ’ ಅವರ ಸಂದರ್ಶನ ನಡೆಸಿತು. ಆಮ್ ಆದ್ಮಿ ಪಕ್ಷದಿಂದ ಹೊರಬರಲು ಕಾರಣವಾದ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ನೀವು ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರು. ಅರವಿಂದ ಕೇಜ್ರಿವಾಲರನ್ನು ತೀರಾ ಹತ್ತಿರದಿಂದ ಬಲ್ಲವರು, ಮತ್ತೆ ಅವರು ಸರ್ವಾಧಿಕಾರಿ ಎಂದು ಆರೋಪಿಸಿ ಪಕ್ಷದಿಂದ ಹೊರಬಂದಿರಿ?
ಯೋಗೇಂದ್ರ ಯಾದವ್: ಆಪ್‌ನಲ್ಲಿ ನಡೆದ ಘಟನೆಗಳು ರಾತ್ರೋರಾತ್ರಿಯಲ್ಲಿ ನಡೆದವುಗಳಲ್ಲ. 2014ರ ಲೋಕಸಭಾ ಚುನಾವಣೆಯ ಬಳಿಕ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಒಂದು ರೀತಿಯ ಭಯ ಮತ್ತು ಆತಂಕವಿತ್ತು. ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂಬುದು ಅದರ ಬಯಕೆಯಾಗಿತ್ತು. ಆವಾಗಿನಿಂದಲೇ ನಾನು ಮತ್ತು ಪ್ರಶಾಂತ್ ಭೂಷಣ್ ಇದನ್ನು ವಿರೋಧಿಸಲಾರಂಭಿಸಿದೆವು. ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವುದು ನಮ್ಮ ಉದ್ದೇಶವಲ್ಲ. ಅಧಿಕಾರ ಬೇಕು. ಆದರೆ ಅದಕ್ಕಾಗಿ ನಾವು ನಮ್ಮ ನೈತಿಕತೆ, ಮರ್ಯಾದೆ ಹಾಗೂ ಮಾನದಂಡಗಳನ್ನು ಬಿಡಬಾರದು. ದುರ್ಜನರ ಅಥವಾ ದುರ್ಜನರ ವಿಚಾರಗಳ ಆಶ್ರಯ ಪಡೆಯಬಾರದೆಂಬುದು ನಮ್ಮಿಬ್ಬರ ನಿಲುವಾಗಿತ್ತು. ಅಲ್ಲಿಂದಲೇ ನಮ್ಮ ವಿರೋಧ ಆರಂಭವಾಗಿತ್ತು. ನಾವು ವೌನವಾಗಿರಲಿಲ್ಲ. ಆದರೆ ಆ ಸಮಯದಲ್ಲಿ ಇದು ಕೇವಲ ಪಕ್ಷದ ಒಳಗೆ ಮಾತ್ರ ಸೀಮಿತವಾಗಿತ್ತು. ವಿಧಾನಸಭೆ ಚುನಾವಣೆಯ ಸಂದರ್ಭ ಈ ವಿರೋಧ ಮತ್ತಷ್ಟು ತೀಕ್ಷ್ಣವಾಯಿತು. ಪಕ್ಷದ ವಿಚಾರಗಳ ವಿರುದ್ಧ ಇರುವ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಜನರನ್ನು ಪಕ್ಷಕ್ಕೆ ಸೇರಿಸಲಾಗುತ್ತಿತ್ತು. ಇದನ್ನು ನಾವು ವಿರೋಧಿಸಿದೆವು. ವಿರೋಧ ತೀಕ್ಷ್ಣವಾಗತೊಡಗಿತು. ಆಗ ಇದೆಲ್ಲಾ ಪಕ್ಷದೊಳಗೇ ಇತ್ತು. ಚುನಾವಣೆ ಮುಗಿದ ಬಳಿಕ ಮತ್ತೆ ನಮ್ಮ ವಿರೋಧವನ್ನು ವ್ಯಕ್ತಪಡಿಸಿದಾಗ, ಹೀಗೆಲ್ಲ ವಿರೋಧಿಸಿದರೆ ನೀವು ಪಕ್ಷದಿಂದ ಹೊರಹೋಗಬೇಕಾದೀತು ಎಂದು ನಮಗೆ ಎಚ್ಚರಿಕೆ ನೀಡಲಾಯಿತು. ಸುಮ್ಮನಿದ್ದರೆ ಉತ್ತಮ ಆಫರ್ ಸಿಗಬಹುದು ಎಂದು ನಮ್ಮನ್ನು ಬಾಯಿ ಮುಚ್ಚಿಸುವ ಪ್ರಯತ್ನ ನಡೆಯಿತು. ಆದರೆ ನಮಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ. ಕಾರಣ ಇಷ್ಟೇ.
ಯಾವ ರೀತಿಯ ಆಫರ್?
ಯೋಗೇಂದ್ರ ಯಾದವ್: ‘ನಿಮಗೆ ಕೆಲ ರಾಜ್ಯಗಳ ಮುಖ್ಯಸ್ಥನ ಹುದ್ದೆ ನೀಡಲಾಗುವುದು. ರೈತ ಆಂದೋಲನದ ಅಧಿಕಾರ ನೀಡಲಾಗುವುದು’ ಎಂದು ನನಗೆ ಹೇಳಲಾಯಿತು. ಪ್ರಶಾಂತ್ ಭೂಷಣ್‌ರಿಗೆ ಅವರ ಇಚ್ಛೆಯ ಆಯ್ಕೆಗೆ, ರಾಜ್ಯಸಭಾ ಸ್ಥಾನದ ಬಗ್ಗೆ ಪ್ರಸ್ತಾಪ ಇರಿಸಲಾಗಿತ್ತು. ಆದರೆ ಆ ಮಾತುಗಳನ್ನು ನಾವು ಕೇಳುವಂತೆಯೇ ಇರಲಿಲ್ಲ. ನಾವು ಪಕ್ಷದ ಸಿದ್ಧಾಂತಗಳ ಬಗ್ಗೆ ಪ್ರಶ್ನೆ ಮಾಡಿದ್ದು. ನಾವಂತೂ ಸುಮ್ಮನಿರುವುದಿಲ್ಲ ಎಂದು ಹೇಳಬೇಕಾಯಿತು.
*ಭಿನ್ನಾಭಿಪ್ರಾಯಗಳು ಎಲ್ಲಾ ಪಕ್ಷಗಳಲ್ಲೂ ಸಾಮಾನ್ಯ ಆಪ್‌ನಲ್ಲೂ ಆಗಿರಬಹುದು. ಹಾಗಂತ ಪಕ್ಷ ಬಿಡುವುದು ಸರಿಯೇ ?
-ಯೋಗೇಂದ್ರ ಯಾದವ್: ಭಿನ್ನಾಭಿಪ್ರಾಯ ಪ್ರತಿಯೊಬ್ಬ ವ್ಯಕ್ತಿಗಳ ನಡುವೆ, ಕುಟುಂಬದಲ್ಲೂ ಇರುತ್ತವೆ. ವ್ಯಕ್ತಿಗತ ಭಿನ್ನಾಭಿಪ್ರಾಯಗಳು ಸಾಮಾನ್ಯ. ಪ್ರಪಂಚದಲ್ಲಿ ವ್ಯಕ್ತಿಗತ ಭಿನ್ನಾಭಿಪ್ರಾಯ ಇಲ್ಲದ ಯಾವುದೇ ಸಂಘಟನೆ ಇಲ್ಲ. ಇನ್ನು ರಾಜಕೀಯ ಭಿನ್ನಾಭಿಪ್ರಾಯ. ಹೆಚ್ಚಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದು ಸಾಮಾನ್ಯ. ಆದರೆ, ಅದನ್ನು ನಿವಾರಿಸಬೇಕು. ವ್ಯಕ್ತಿಗತ ಭಿನ್ನಾಭಿಪ್ರಾಯ ಮರೆತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ನಿವಾರಣೆ ಮಾಡಬೇಕು. ಆದರೆ ಮೂಲತತ್ವಗಳ ಕುರಿತಾದ ಭಿನ್ನಾಭಿಪ್ರಾಯ, ಆಮ್ ಆದ್ಮಿ ಪಕ್ಷದಲ್ಲಿ ನಾವು ಬೇರೆ ಪಕ್ಷದಲ್ಲಿರುವಂತೆಯೇ ಮಾಡಬೇಕು. ಯಾರೋ ಒಬ್ಬ ಕಾಂಟ್ರಾಕ್ಟರ್ ಕೋಟ್ಯಂತರ ರೂಪಾಯಿ ಮಾಡಿಕೊಂಡು ಇದೀಗ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗುತ್ತಾನೆಂದರೆ ಅದಕ್ಕೆ ಅವಕಾಶ ನೀಡುವುದು ಪಕ್ಷದ ಮೂಲತತ್ವದ ವಿಚಾರ. ಇದಕ್ಕೆ ನಮ್ಮ ಸಹಮತವಿರಲಿಲ್ಲ. ದೇಶದಲ್ಲಿ ಒಂದು ಪರ್ಯಾಯ ರಾಜಕೀಯ ಪಕ್ಷದ ಧ್ಯೇಯವನ್ನಿಟ್ಟುಕೊಂಡು ನಾವೇನು ಒಂದು ಪಕ್ಷ ಮಾಡಿ ಚುನಾವಣೆ ಎದುರಿಸುವುದಕ್ಕಾಗಿ ಬಂದವರಲ್ಲ. ಅದನ್ನು ಕಾಂಗ್ರೆಸ್, ಬಿಜೆಪಿ ಮಾಡುತ್ತಿದೆ. ಯಾರದ್ದಾದರೂ ಸಿಂಹಾಸನದಲ್ಲಿ ಆಸೀನರಾಗಬೇಕಾಗಿದ್ದರೆ ರಾಹುಲ್ ಗಾಂಧಿ, ಮೋದಿಯವರ ಸಿಂಹಾಸನದಲ್ಲೂ ಕುಳಿತುಕೊಳ್ಳಬಹುದಲ್ಲ. ನಾವು ಅದಕ್ಕೆಲ್ಲಾ ವಿಭಿನ್ನ ರೀತಿಯ ಪಕ್ಷ ಕಟ್ಟಲು ಬಂದವರು. ಆದರೆ ಆ ರೀತಿ ಆಗದಿದ್ದಾಗ ಅದನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯವಾಗಿತ್ತು. ಪ್ರಶಾಂತ್ ಭೂಷಣ್ ಪಕ್ಷದೊಳಗೆ ಇದ್ದಾಗ ಹೊರಗಿನವರಿಗೆ ನಂಬಿಕೆ ಇತ್ತು. ಅವರು ಯಾವುದೇ ರೀತಿಯಲ್ಲಿ ತಪ್ಪಾಗಲು ಅವಕಾಶ ನೀಡುವುದಿಲ್ಲ ಎಂಬುದು. ಆಗ ತಪ್ಪಾಗದಂತೆ ಎಚ್ಚರಿಕೆ ವಹಿಸುವುದು ಅವರ ಕರ್ತವ್ಯವಾಗಿತ್ತಲ್ಲವೇ?.
*ರೈತರ ಪರ ಸ್ವರಾಜ್ ಅಭಿಯಾನ ಮುಂದೆ ಪಕ್ಷವಾಗಿ ರೂಪುಗೊಂಡಾಗ ರೈತರು ಸೇರಿದಂತೆ ದೇಶದ ಹಲವಾರು ಸಮಸ್ಯೆಗಳನ್ನು ಹೇಗೆ ನಿವಾರಿಸಬಲ್ಲದು? ಆಗ ಕೇವಲ ಪಕ್ಷವಾಗಿ ಉಳಿದು ಬಿಡುತ್ತದೆ ಅಲ್ಲವೇ?
-ಯೋಗೇಂದ್ರ ಯಾದವ್: ಇದು ಕೇವಲ ನನ್ನ ಮತ್ತು ಪ್ರಶಾಂತ್ ಭೂಷಣ್ ಅವರ ವಿಚಾರವಲ್ಲ. ಸ್ವರಾಜ್ ಅಭಿಯಾನದಲ್ಲಿ ವ್ಯಕ್ತಿಗಳಿಗೆ ಯಾವುದೇ ಮಹತ್ವವಿಲ್ಲ. ಸ್ವರಾಜ್ ಅಭಿಯಾನದಲ್ಲಿ ನಾವೊಂದು ನಿರ್ಧಾರವನ್ನು ಕೈಗೊಂಡಿದ್ದೇವೆ. ಯಾರದ್ದೇ ಹೆಸರಿನಲ್ಲಿ, ಫೋಟೊ ಹಾಕಿ ಬ್ಯಾನರ್ ಹಾಕಲಾಗುವುದಿಲ್ಲ. ವ್ಯಕ್ತಿ ಕೇಂದ್ರಿತ ಸಂಘಟನೆ ನಾವು ಮಾಡುವುದಿಲ್ಲ. ಸದ್ಯಕ್ಕೆ ನಾವು ಪಕ್ಷ ಕಟ್ಟುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಾವು ಪ್ರಸ್ತುತ ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದೇವೆ. ಆ ನಿಯಮಗಳ ಅನುಸಾರ ಆಯ್ಕೆ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಈಗ ನಾವು ಕೇವಲ ಹೋರಟಗಾರರು.
*ಮುಂದೆ ಅಂತಹ ಪರಿಸ್ಥಿತಿ ಬರಬಹುದಲ್ಲ?
ಯೋಗೇಂದ್ರ ಯಾದವ್: ಮುಂದೆ ಆಯ್ಕೆ ಸಮಿತಿಯಾದ ಬಳಿಕ ಆಗ ಅದು ನಿರ್ಣಯ ಕೈಗೊಳ್ಳುತ್ತದೆ. ಈಗ ನಾವು ಯಾರೂ ಸಮಿತಿಯಿಂದ ಆಯ್ಕೆಯಾದವರಲ್ಲ. ಹಾಗಾಗಿ ಈಗ ಆ ಬಗ್ಗೆ ನಾವು ಹೇಗೆ ಹೇಳಲು ಸಾಧ್ಯ. *ಆಮ್ ಆದ್ಮಿ ಪಕ್ಷ ಕೂಡಾ ಹಾಗೆಯೇ ರಚನೆಯಾಗಿತ್ತು. ಅದು ಕೂಡಾ ಆರಂಭದಲ್ಲಿ ವ್ಯಕ್ತಿಗತ ಪಕ್ಷವಾಗಿರಲಿಲ್ಲ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಅದೂ ಒಂದು ಪಕ್ಷವಾಗಿ ಬೆಳೆಯುತ್ತಾ ಎಲ್ಲರನ್ನೂ ತನ್ನ ಜೊತೆ ಸೇರಿಸಿಕೊಂಡಿತ್ತು.
ಹಾಗಿದ್ದರೂ ಅದರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಯಿತು ಅಲ್ಲವೇ?
ಯೋಗೇಂದ್ರ ಯಾದವ್: ಆಮ್ ಆದ್ಮಿ ಪಕ್ಷದಲ್ಲಿ ಆರಂಭದಲ್ಲೇ ವ್ಯಕ್ತಿ ಕೇಂದ್ರಿತ ರಾಜಕೀಯ ಆರಂಭವಾಯಿತು. ಧ್ವಜದಲ್ಲಿ ಫೋಟೋ, ಟೋಪಿಯಲ್ಲಿ ಫೋಟೋ. ಇದನ್ನು ಜಯಲಲಿತಾರೂ ಮಾಡುವುದಿಲ್ಲ, ಲಾಲೂ ಪ್ರಸಾದ್‌ಕೂಡಾ ಮಾಡುವುದಿಲ್ಲ. ಇದೆಲ್ಲಾ ಆರಂಭವಾಯಿತು. ಆದರೆ ಆ ಹಂತದಲ್ಲೇ ನಾವದನ್ನು ತಡೆಯಲು ಸಾಧ್ಯವಾಗದ್ದು ನಮ್ಮ ತಪ್ಪು. ದಿಲ್ಲಿಯ ಚುನಾವಣೆಗಾಗಿ ಇದೆಲ್ಲಾ ಮಾಡಲಾಗುತ್ತಿದೆ ಎಂದು ನಮಗೆ ಹೇಳಲಾಗಿತ್ತು. ದಿಲ್ಲಿಯಲ್ಲಿ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಎಂದೆಲ್ಲಾ ಬಿಂಬಿಸಲಾಯಿತು. ಆದರೆ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿ ಕೇಂದ್ರಿತ ಪಕ್ಷ ಮಾಡುವುದು ಆಗಲೇ ಆರಂಭಗೊಂಡಿತು. ಇದು ವೈಯಕ್ತಿಕ ಭಿನ್ನಾಭಿಪ್ರಾಯದ ವಿಷಯ ಅಲ್ಲ ಎಂದು ನಾನು ಮತ್ತೆ ಮತ್ತೆ ಹೇಳುತ್ತೇನೆ. ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಇರಲೇ ಇಲ್ಲ. ಇದ್ದಿದ್ದು, ಕೇವಲ ಪಕ್ಷದ ತತ್ವ, ಉದ್ದೇಶಗಳ ಬಗೆಗಿನ ಭಿನ್ನಾಭಿಪ್ರಾಯ.
*ದಿಲ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ನೀವು ಮತ್ತು ಪ್ರಶಾಂತ್ ಭೂಷಣ್ ಕೆಲಸ ಮಾಡಿದ್ದೀರೆಂಬ ಆರೋಪ ಇದೆಯಲ್ಲಾ?
-ಯೋಗೇಂದ್ರ ಯಾದವ್: ಒಂದು ವರ್ಷದ ಹಿಂದೆ ಈ ಆರೋಪ ಮಾಡಲಾಗಿತ್ತು. ಈ ಬಗ್ಗೆ ನಾನು ಆ ಸಮಯದಲ್ಲಿ ಸಾರ್ವಜನಿಕ ವಲಯದಲ್ಲಿ ಸಾಕ್ಷಗಳನ್ನೂ ಒದಗಿಸಿದ್ದೆ. ಆ ಚುನಾವಣೆಯಲ್ಲಿ ನಾನು 87 ರ್ಯಾಲಿಗಳನ್ನು ನಡೆಸಿದ್ದೆ. ನನ್ನ ವಿರುದ್ಧ ಬ್ಯಾನರ್ ಹಿಡಿದು ನಿಂತವರ ಕ್ಷೇತ್ರದಲ್ಲೇ ನಾನು ರ್ಯಾಲಿ ನಡೆಸಿದ್ದೆ. ಪ್ರಚಾರದ ಕೊನೆ ದಿನದವರೆಗೆ ನಾನು ರ್ಯಾಲಿಗಳನ್ನು ನಡೆಸಿದ್ದೆ. ಪಕ್ಷದ ವಕ್ತಾರನಾಗಿಯೂ ಕಾರ್ಯನಿರ್ವಹಿಸಿದ್ದೆ.ಟೆಲಿವಿಶನ್‌ನಲ್ಲಿಯೂ ಆಮ್ ಆದ್ಮಿ ಪಕ್ಷ ಹೇಗೆ ಗೆಲ್ಲಲಿದೆ ಎಂದು ಹೇಳಿಕೊಂಡಿದ್ದೆ. ನನ್ನ ಸ್ವರದ ಪ್ರತಿಯಲ್ಲಿ ಆಮ್ ಆದ್ಮಿ ಪಕ್ಷ ಒಂದು ಕೋಟಿ ಟೆಲಿಫೋನ್ ಕರೆಗಳನ್ನು ಮಾಡಿತ್ತು. ಇದು ಪಕ್ಷವನ್ನು ಸೋಲಿಸುವುದಾದರೆ, ಪಕ್ಷವನ್ನು ಸೋಲಿಸಲು ಇನ್ನಷ್ಟು ಜನರ ಅಗತ್ಯವಿದೆಯಲ್ಲವೇ? ಈ ರೀತಿಯ ಅಪಪ್ರಚಾರದಿಂದ ಏನೂ ಪ್ರಯೋಜನವಿಲ್ಲ. ಇದು ಹಿಟ್ಲರ್ ರೀತಿಯ ವರ್ತನೆ. ಒಂದು ಸುಳ್ಳನ್ನು ಪದೇ ಪದೇ ಹೇಳುತ್ತಿದ್ದರೆ, ಜನರಲ್ಲೂ ಏನಾದರೂ ಇರಬೇಕೆಂಬ ಸಂಶಯ ಮೂಡಲಾರಂಭಿಸುತ್ತದೆ. ಆದರೆ ಇಂತಹ ಸುಳ್ಳಿನ ರಾಜಕಾರಣ ಮಾಡುವುದರಿಂದ ಒಮ್ಮೆಗೆ ನಡೆದು ಹೋಗಬಹುದು. ಆದರೆ ಮತ್ತೆ ನೀವು ಸತ್ಯ ಹೇಳಿದರೂ ಜನ ಅದನ್ನು ನಂಬಲಾರರು.
*ಈಗ ಕೇಜ್ರಿವಾಲ್ ಒಳ್ಳೆ ಕೆಲಸ ಮಾಡುತ್ತಿದ್ದಾರಲ್ಲ?
-ಯೋಗೇಂದ್ರ ಯಾದವ್: ಅದನ್ನು ದಿಲ್ಲಿಯ ಜನರು ನಿರ್ಧರಿಸಬೇಕು. ನಾನು ಯಾರು ಹೇಳಲು. ನಮ್ಮ ಸ್ವರಾಜ್ ಅಭಿಯಾನದಲ್ಲಿ ಅರವಿಂದ ಕೇಜ್ರಿವಾಲ್ ಬಗ್ಗೆ ಚರ್ಚಿಸಲು ಯಾವುದೇ ಸಮಯವಿಲ್ಲ. ನಮಗೆ ನಮ್ಮ ಚಳವಳಿಯಲ್ಲಿ ಮಾಡಲು ಸಾಕಷ್ಟು ಕೆಲಸವಿದೆ. ನಾವು ನಮ್ಮ ಧನಾತ್ಮಕ ಉದ್ದೇಶಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಚಳವಳಿಯಲ್ಲಿ ಎಲ್ಲಿಯೂ ಅರವಿಂದ ಕೇಜ್ರಿವಾಲರು ಅಥವಾ ಆಮ್ ಆದ್ಮಿ ನಮ್ಮ ಗುರಿಯಲ್ಲ. ಅವರನ್ನು ಟೀಕಿಸುವುದು ಅವರನ್ನು ವಿಮರ್ಶಿಸುವುದು ನಮ್ಮ ಅಜೆಂಡಾದಲ್ಲಿ ಇಲ್ಲ. ಆದರೆ, ಒಂದು ವೇಳೆ ನಮ್ಮ ಕೆಲಸಕ್ಕೆ ಅಡ್ಡಿ ಪಡಿಸಿದರೆ ಖಂಡಿತಾ ವಿರೋಧಿಸುತ್ತೇವೆ. ಬಿಜೆಪಿ, ಕಾಂಗ್ರೆಸ್‌ನ ತಪ್ಪುಗಳನ್ನು ವಿರೋಧಿಸುತ್ತಿರುವಂತೆ.







