ಕುದುರೆಮುಖ ಸಂಸ್ಥೆಗೆ ರಾಜ್ಯ ಸರಕಾರದಿಂದ ಮಂಜೂರಾತಿ: ಮೊಯ್ದಿನ್ ಬಾವ

ಮಂಗಳೂರು, ಫೆ. 1: ಕುದುರೆಮುಖ ಅದಿರು ಸಂಸ್ಥೆಗೆ ಬಳ್ಳಾರಿಯ ದೇವದಾರಿ ಪ್ರದೇಶದಲ್ಲಿ ಕಬ್ಬಿಣದ ಅದಿರು ನಿಕ್ಷೇಪ ಗಣಿಗಾರಿಕೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದ್ದು, ಕೇಂದ್ರದಿಂದ ಅನುಮತಿ ದೊರೆತಾಕ್ಷಣ ಗಣಿಗಾರಿಕೆ ಆರಂಭಗೊಳ್ಳಲಿದೆ ಎಂದು ಶಾಸಕ ಮೊಯ್ದಿನ್ ಬಾವಾ ತಿಳಿಸಿದ್ದಾರೆ.
ಮನಪಾದ ಶಾಸಕರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಳ್ಳಾರಿ ಜಿಲ್ಲೆಯ 14 ಕಿ.ಮೀ. ದೂರದ ದೇವದಾರಿ ಪ್ರದೇಶದ 474 ಹೆಕ್ಟೇರ್ ಭೂ ಪ್ರದೇಶದಲ್ಲಿ ಕಬ್ಬಿಣದ ಅದಿರು ನಿಕ್ಷೇಪ ಗಣಿಗಾರಿಕೆಗೆ ರಾಜ್ಯ ಸರಕಾರ ಮಂಜೂರಾತಿ ನೀಡುವ ಮೂಲಕ ಕುದುರೆಮುಖ ಸಂಸ್ಥೆಯ ಸಾವಿರಕ್ಕೂ ಅಧಿಕ ನೌಕರರು, 500ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಸೇರಿದಂತೆ 10,000 ಕುಟುಂಬಗಳಿಗೆ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.
ಕಬ್ಬಿಣದ ಅದಿರು ನಿಕ್ಷೇಪವಿಲ್ಲದೆ ಕುದುರೆಮುಖ ಕಂಪನಿ ಆರ್ಥಿಕವಾಗಿ ದುಸ್ಥಿತಿಯಲ್ಲಿತ್ತು. ಈ ಬಗ್ಗೆ ಸಂಸ್ಥೆಯ ಉದ್ಯೋಇಗಗಳು ಹಾಗೂ ಆಡಳಿತ ಮಂಡಳಿಯು ಅದಿರು ನಿಕ್ಷೇಪ ಒದಗಿಸುವಂತೆ ತನಗೆ ಹಲವು ಬಾರಿ ಮನವಿ ಮಾಡಿಕೊಂಡಿತ್ತು. ಈ ಬಗ್ಗೆ ರಾಜ್ಯ ವಿಧಾನ ಮಂಡಲದಲ್ಲಿ ಮನವಿ ಮಾಡಿದ್ದೆ. ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಜತೆ ಚರ್ಚಿಸಿದ ಪರಿಣಾಮವಾಗಿ ರಾಜ್ಯ ಸರಕಾರ ಸ್ಪಂದಿಸಿದೆ. ಒಂದು ತಿಂಗಳೊಳಗೆ ಕೇಂದ್ರದ ಅನುಮತಿಯೂ ದೊರಕಲಿದೆ ಎಂದವರು ಹೇಳಿದರು.
ಚುನಾವಣೆ ಬಳಿಕ ದ.ಕ. ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಲಿದ್ದು, ಈ ಸಂದರ್ಭ ಪಣಂಬೂರಿನ ಕುದುರೆಮುಖ ಅದಿರು ಸಂಸ್ಥೆಗೆ ಭೇಟಿ ನೀಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಮೆಲ್ವಿನ್ ಡಿಸೋಜಾ, ಲಾರೆನ್ಸ್, ಲ್ಯಾನ್ಸಿ, ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು.







