ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್: ವಿರಾಟ್ ಕೊಹ್ಲಿ ನಂ.1 ಬ್ಯಾಟ್ಸ್‌ಮನ್

ದುಬೈ, ಫೆ.1: ಆಸ್ಟ್ರೇಲಿಯ ವಿರುದ್ಧ ರವಿವಾರ ಕೊನೆಗೊಂಡ ಟ್ವೆಂಟಿ-20 ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಆಸ್ಟ್ರೇಲಿಯದ ಟ್ವೆಂಟಿ-20 ತಂಡದ ನಾಯಕ ಆ್ಯರೊನ್ ಫಿಂಚ್ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಳೆದುಕೊಂಡಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಔಟಾಗದೆ 90, ಔಟಾಗದೆ 59 ಹಾಗೂ 50 ರನ್ ಗಳಿಸಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಲು ದೊಡ್ಡ ಕಾಣಿಕೆ ನೀಡಿದ್ದ ಕೊಹ್ಲಿ 47 ರೇಟಿಂಗ್ ಪಾಯಿಂಟ್ ಗಳಿಸಿದ್ದರು. ಈ ಮೂಲಕ ಮೊದಲ ಸ್ಥಾನದಲ್ಲಿದ್ದ ಫಿಂಚ್‌ರನ್ನು ಎರಡನೆ ಸ್ಥಾನಕ್ಕೆ ತಳ್ಳಿದ್ದರು.
ಅಡಿಲೇಡ್ ಹಾಗೂ ಮೆಲ್ಬೋರ್ನ್‌ನಲ್ಲಿ ನಡೆದ ಟ್ವೆಂಟಿ-20 ಪಂದ್ಯಗಳಲ್ಲಿ 44 ಹಾಗೂ 74 ರನ್ ಗಳಿಸಿದ್ದ ಫಿಂಚ್ 14 ಅಂಕವನ್ನು ಗಳಿಸಿದ್ದಾರೆ. ಆದರೆ, ಅವರು ಗಾಯದ ಸಮಸ್ಯೆಯಿಂದಾಗಿ ಸಿಡ್ನಿಯಲ್ಲಿ ನಡೆದಿದ್ದ ಸರಣಿಯ ಕೊನೆಯ ಪಂದ್ಯದಲ್ಲಿ ಆಡಿರಲಿಲ್ಲ.
ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಇನ್ನೋರ್ವ ಆಟಗಾರ ಸುರೇಶ್ ರೈನಾ ಮೂರು ಸ್ಥಾನ ಭಡ್ತಿ ಪಡೆದು 13ನೆ ಸ್ಥಾನ ತಲುಪಿದರು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ನಾಲ್ಕು ಸ್ಥಾನ ಭಡ್ತಿ ಪಡೆದು 16ನೆ ಸ್ಥಾನಕ್ಕೇರಿದ್ದಾರೆ.
ಭಾರತ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 17 ರನ್ ಗಳಿಸಿ ಆ ನಂತರ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿ ಆಡಲು ಕಿವೀಸ್ ನಾಡಿಗೆ ತೆರಳಿರುವ ಡೇವಿಡ್ ವಾರ್ನರ್ ಆರು ಸ್ಥಾನ ಕೆಳಜಾರಿ 18ನೆ ಸ್ಥಾನದಲ್ಲಿದ್ದಾರೆ.
ಶಂಕಾಸ್ಪದ ಬೌಲಿಂಗ್ ಆರೋಪದಲ್ಲಿ ಐಸಿಸಿಯಿಂದ ನಿಷೇಧ ಎದುರಿಸುತ್ತಿರುವ ವೆಸ್ಟ್‌ಇಂಡೀಸ್‌ನ ಸ್ಪಿನ್ನರ್ ಸುನೀಲ್ ನರೇನ್ ಟ್ವೆಂಟಿ-20 ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಸಚಿನ್ ಸಲಹೆ ನೆರವಿಗೆ ಬಂತು: ಕೊಹ್ಲಿ
ಸಿಡ್ನಿ, ಫೆ.1: ‘‘ವೃತ್ತಿಜೀವನದ ಆರಂಭದಲ್ಲಿ ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ನೀಡಿದ್ದ ಸಲಹೆ ತನಗೆ ತುಂಬಾ ನೆರವಾಯಿತು’’ ಎಂದು ಭಾರತದ ಸ್ಟಾರ್ ದಾಂಡಿಗ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
‘‘ನಾನು ಕ್ರಿಕೆಟ್ ಆಡಲು ಅವರೇ(ತೆಂಡುಲ್ಕರ್) ಕಾರಣ. ದೇಶದ ಪರ ಉತ್ತಮ ಪ್ರದರ್ಶನ ನೀಡಲು ನನಗೆ ಅವರೇ ಸ್ಫೂರ್ತಿ. ವೃತ್ತಿಜೀವನದ ಆರಂಭದ ದಿನಗಳಲ್ಲಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ನನ್ನ ಭಾಗ್ಯ. ಅವರು ನನ್ನ ಆಟದ ಶೈಲಿ ಸುಧಾರಿಸಲು ತುಂಬಾ ನೆರವಾಗಿದ್ದರು. ಅವರಿಗೆ ನನ್ನ ಬ್ಯಾಟಿಂಗ್‌ನಲ್ಲಿ ದೋಷ ಕಂಡು ಬಂದರೆ ತನ್ನ ಬಳಿ ಬಂದು ಸಲಹೆ ನೀಡುತ್ತಿದ್ದರು. ಇದು ನನಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡಿತು. ನನಗೆ ಅವರೊಂದಿಗೆ ಬ್ಯಾಟಿಂಗ್ ಮಾಡುವ ಅವಕಾಶವೂ ಲಭಿಸಿತ್ತು. ಅದು ನನ್ನ ಪಾಲಿಗೆ ತುಂಬಾ ವಿಶೇಷವಾಗಿದೆ’’ಎಂದು ಕೊಹ್ಲಿ ಹೇಳಿದ್ದಾರೆ.







