ಹೊಸದಿಲ್ಲಿ;ಗುಜರಾತ್‌ನಲ್ಲಿ ಆಹಾರ ಭದ್ರತಾ ಕಾಯ್ದೆ ಯಾಕಿಲ್ಲ? ಸುಪ್ರೀಂಕೋರ್ಟ್ ತರಾಟೆ
ಹೊಸದಿಲ್ಲಿ,ಫೆ.1ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸದಿರುವುದಕ್ಕಾಗಿ ಸುಪ್ರೀಂಕೋರ್ಟ್ , ಗುಜರಾತ್ ಸೇರಿದಂತೆ ಕೆಲವು ನಿರ್ದಿಷ್ಟ ರಾಜ್ಯಗಳನ್ನು ತರಾಟೆಗೆ ಸೋಮವಾರ ತೆಗೆದುಕೊಂಡಿದೆ.
‘‘ ಸಂಸತ್ ಏನು ಮಾಡುತ್ತಿದೆ? ಗುಜರಾತ್ ಭಾರತದ ಭಾಗವಲ್ಲವೇ?.ಈ ಕಾಯ್ದೆಯು ಇಡೀ ರಾಷ್ಟ್ರಕ್ಕೆ ಅನ್ವಯವಾಗುತ್ತದೆ. ಆದರೆ ಗುಜರಾತ್ ಅದನ್ನು ಇನ್ನೂ ಜಾರಿಗೊಳಿಸಿಲ್ಲ. ನಾಳೆ, ಇನ್ನೊಂದು ರಾಜ್ಯವು ತಾನು ಕ್ರಿಮಿನಲ್ ದಂಡಸಂಹಿತೆ, ಭಾರತೀಯ ದಂಡಸಂಹಿತೆ ಹಾಗೂ ಸಾಕ್ಷಾಧಾರ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೆಂದೂ ಹೇಳಲೂ ಬಹುದು ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕುರ್ ನೇತೃತ್ವದ ನ್ಯಾಯಪೀಠ, ಖಾರವಾಗಿ ಹೇಳಿದೆ.
ವಿವಿಧ ರಾಜ್ಯಗಳ ಬರಪೀಡಿತ ಪ್ರದೇಶಗಳಲ್ಲಿ ನರೇಗಾ, ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಮಧ್ಯಾಹ್ನದೂಟದಂತಹ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ನ್ಯಾಯಪೀಠವು ಕೇಂದ ಸರಕಾರಕ್ಕೆ ಸೂಚನೆ ನೀಡಿದೆ. ಈ ಬಗ್ಗೆ ಫೆಬ್ರವರಿ 10ರೊಳಗೆ ತನಗೆ ಅಫಿದಾವಿತ್ ಸಲ್ಲಿಸುವಂತೆಯೂ ಅದು ಆದೇಶಿಸಿದೆೆ ಹಾಗೂ ವಿಷಯದ ಮುಂದಿನ ಆಲಿಕೆಯನ್ನು ಎರಡು ದಿನಗಳವರೆಗೆ ಮುಂದೂಡಿದೆ.
ಬರಪೀಡಿತ ಪ್ರದೇಶಗಳಲ್ಲಿ ನರೇಗಾ, ಆಹಾರ ಭದ್ರತಾ ಕಾಯ್ದೆ ಹಾಗೂ ಮಧ್ಯಾಹ್ನದೂಟ ಯೋಜನೆಗಳ ಅನುಷ್ಠಾನದ ಸ್ಥಿತಿಗತಿ ಬಗ್ಗೆ ಮಾಹಿತಿಯನ್ನು ನೀಡುವಂತೆ, ಸುಪ್ರೀಂಕೋರ್ಟ್ ಜನವರಿ 18ರಂದು ಕೇಂದ್ರ ಸರಕಾರಕ್ಕೆ ತಿಳಿಸಿತ್ತು.ಸಂತ್ರಸ್ತರಿಗೆ ಅಗತ್ಯವಿರುವ ಕನಿಷ್ಠ ಉದ್ಯೋಗ ಹಾಗೂ ಆಹಾರವನ್ನು ಒದಗಿಸಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಸಲ್ಲಿಸುವಂತೆಯೂ ಅದು ತಿಳಿಸಿತ್ತು.
ಉತ್ತರಪ್ರದೇಶ, ಕರ್ನಾಟಕ ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಂಡ್, ಬಿಹಾರ, ಹರ್ಯಾಣ ಹಾಗೂ ಚತ್ತೀಸ್‌ಗಢ ಮತ್ತಿತರ ರಾಜ್ಯಗಳ ಬರಪೀಡಿತ ಭಾಗಗಳಲ್ಲಿ ಸಂತ್ರಸ್ತರಿಗೆ ಇಲಾಖೆಗಳು ಯಾಕೆ ಸಮರ್ಪಕವಾದ ಪರಿಹಾರವನ್ನು ಒದಗಿಸಲು ವಿಫಲವಾಗಿವೆಯೆಂದು ನ್ಯಾಯಪೀಠ ಪ್ರಶ್ನಿಸಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ಆಲಿಕೆಯ ಸಂದರ್ಭದಲ್ಲಿ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯಗಳನ್ನು ಖಾತರಿಪಡಿಸುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ, ಯೋಗೇಂದ್ರಯಾದವ್, ಶಾಂತಿಭೂಷಣ್ ಮತ್ತಿತರರು ನಡೆಸುತ್ತಿರುವ ‘ಸ್ವರಾಜ್ ಅಭಿಯಾನ್’ ಎನ್‌ಜಿಓ ಸಂಸ್ಥೆಯು, ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(ಪಿಐಎಲ್)ಯನ್ನು ಸಲ್ಲಿಸಿತ್ತು. ಮಧ್ಯಾಹ್ನದೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ಹಾಗೂ ಮೊಟ್ಟೆಯನ್ನು ಒದಗಿಸಬೇಕು. ಬೆಳೆನಷ್ಟಕ್ಕಾಗಿ ರೈತರಿಗೆ ಸಕಾಲಿಕವಾಗಿ ಸೂಕ್ತವಾದ ಪರಿಹಾರವನ್ನು ಒದಗಿಸಬೇಕು ಹಾಗೂ ಮುಂದಿನ ಬೆಳೆಗೆ ಸಬ್ಸಿಡಿಯನ್ನು ಒದಗಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದರು. ಬರಪೀಡಿತ ಪ್ರದೇಶಗಳಲ್ಲಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೀವ್ರ ನಿರ್ಲಕ್ಷವನ್ನು ಪ್ರದರ್ಶಿಸಿವೆ. ಅವುಗಳ ನಿಷ್ಕ್ರಿಯತೆಯಿಂದಾಗಿ, ಜನರ ಬದುಕಿಗೆ ಅಪಾರವಾದ ಹಾನಿಯಾಗಿದೆ. ಇದು ಸಂವಿಧಾನದ 21 ಹಾಗೂ 14 ನಿಯಮಗಳಡಿ ಖಾತರಿಪಡಿಸಲಾದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯು ಆರೋಪಿಸಿತ್ತು. ಬರದಿಂದಾಗಿ, ಗ್ರಾಮೀಣ ಬಡಜನರಿಗೆ ದೊರೆಯುತ್ತಿದ್ದ ಕೃಷಿ ಉದ್ಯೋಗದ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆಯೆಂದು ಪಿಐಎಲ್ ಅರ್ಜಿಯು ಆತಂಕ ವ್ಯಕ್ತಪಡಿಸಿದೆ.





