ಮಂಗಳೂರು; ಹೆಲ್ಮೆಟ್ ರಹಿತ ಪ್ರಯಾಣ:2642 ಪ್ರಕರಣ ದಾಖಲು
ಮಂಗಳೂರು,ಫೆ.1: ದ್ವಿಚಕ್ರ ವಾಹನ ದಲ್ಲಿ ಮುಂಬದಿ ,ಹಿಂಬದಿ ಸವಾರರು ಇಂದಿನಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಆದೇಶವಿದ್ದರೂ ದ.ಕ ಜಿಲ್ಲೆಯಲ್ಲಿ ಹೆಲ್ಮೆಟ್ ರಹಿತವಾಗಿ ಪ್ರಯಾಣಿಸಿದ 2642 ಮಂದಿಯ ವಿರುದ್ದ ಪ್ರಕರಣಗಳನ್ನು ದಾಖಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀನ ಠಾಣೆಗಳಲ್ಲಿ ಸುಮಾರು 1125 ಪ್ರಕರಣಗಳನ್ನು ದಾಖಲಿಸಿಕೊಂಡು ಸುಮಾರು 1,13,900 ರೂ. ದಂಡ ವಸೂಲಿ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 1517 ಪ್ರಕರಣಗಳನ್ನು ದಾಖಲಿಸಲಾಗಿದೆ.
ದ್ವಿಚಕ್ರ ವಾಹನ ಸವಾರರು ಮತ್ತು ಸಹ ಸವಾರರಿಗೆ ಕಾನೂನು ಪ್ರಕಾರ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಅದನ್ನು ಪಾಲಿಸಿ ತಮ್ಮ ಸುರಕ್ಷತೆಯನ್ನು ಕಾಪಾಡುವಂತೆ ಪೊಲೀಸ್ ಆಯುಕ್ತರು ನಾಗರಿಕರಲ್ಲಿ ವಿನಂತಿಸಿದ್ದಾರೆ.
ಸರಕಾರದ ಅಧಿಸೂಚನೆಯಂತೆ ದ್ವಿಚಕ್ರ ವಾಹನ ಮುಂಬದಿ, ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ, ಬೈಕ್ ರ್ಯಾಲಿ ಹಾಗೂ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು





