ಭಿನ್ನ ಸಾಮಥ್ಯದರ್ವರ ಕಾಳಜಿ ಆಂಧ್ರ ದೇಶಕ್ಕೇ ಅಗ್ರ
ಭಿನ್ನ ಸಾಮರ್ಥ್ಯದ 538 ಮಕ್ಕಳಿಗಾಗಿ ಆಂಧ್ರಪ್ರದೇಶದ ಮಾನಸಿಕ ವಿಕಾಸ ಕೇಂದ್ರಮ್ ಎಂಬ ಸ್ವಯಂಸೇವಾ ಸಂಸ್ಥೆಯೊಂದು ವಿಶೇಷ ಶಿಕ್ಷಣ ನೀಡು ತ್ತಿದೆ. ಈ ಒಂದೇ ಸಂಸ್ಥೆ ನಿರ್ವಹಿಸುವ ಮಕ್ಕಳ ಸಂಖ್ಯೆ ಗೋವಾ, ಛತ್ತೀಸ್‌ಗಡ ರಾಜ್ಯದಲ್ಲಿ ಒಟ್ಟಾಗಿ ಇಂಥ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆಗಿಂತ ಅಧಿಕ.
ಅತ್ಯಧಿಕ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಭಿನ್ನಸಾಮರ್ಥ್ಯದ ಮಕ್ಕಳು ಕೂಡಾ ಅತ್ಯಧಿಕ. ರಾಜ್ಯದಲ್ಲಿ ಇಂಥ ಮಕ್ಕಳ ಸಂಖ್ಯೆ 41.5 ಲಕ್ಷ. ಉತ್ತರಪ್ರದೇಶದಲ್ಲಿರುವ ಭಿನ್ನಸಾಮರ್ಥ್ಯದ ಮಕ್ಕಳ ಸಂಖ್ಯೆಯ ಶೇ.45ರಷ್ಟು ಇಂಥ ಮಕ್ಕಳನ್ನು ಹೊಂದಿರುವ ಆಂಧ್ರಪ್ರದೇಶ, ಆ ರಾಜ್ಯದ ಮೂರು ಪಟ್ಟು ಕೇಂದ್ರದ ಅನುದಾನ ಪಡೆದಿದೆ. ಇಂಥ ಮಕ್ಕಳ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳು ಎಷ್ಟರ ಮಟ್ಟಿಗೆ ಅಧಿಕ ಅನುದಾನ ಪಡೆಯಬಹುದು ಎನ್ನುವುದು ಈ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ತೆಲಂಗಾಣ ಸೇರಿದಂತೆ ಆಂಧ್ರದ ಜನಸಂಖ್ಯೆ 8.4 ಕೋಟಿ ಆಗಿದ್ದರೆ ಉತ್ತರ ಪ್ರದೇಶದ ಜನಸಂಖ್ಯೆ 19.9 ಕೋಟಿ. ದೀನ ದಯಾಳ್ ಭಿನ್ನಸಾಮರ್ಥ್ಯದವರ ಪುನರ್ವಸತಿ ಯೋಜನೆಯಡಿ (ಡಿಡಿಆರ್‌ಎಸ್) ಭಿನ್ನಸಾಮರ್ಥ್ಯದ ಮಕ್ಕಳ ಕಲ್ಯಾಣಕ್ಕೆ ಕೇಂದ್ರ ಅನುದಾನದ ರೂಪದಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಯೋಜನೆಯನ್ನು ನಿರ್ವಹಿಸುತ್ತದೆ. ಡಿಡಿಆರ್‌ಎಸ್ ಯೋಜನೆಯಡಿ ವಿವಿಧ ರಾಜ್ಯಗಳು 2012-2015ರ ವರೆಗೆ ಪಡೆದ ನೆರವಿನ ಬಗೆಗಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಕೆಲವೇ ರಾಜ್ಯಗಳು ಇದನ್ನು ಸಮರ್ಪಕವಾಗಿ ಬಳಸಿಕೊಂಡಿರುವುದು ತಿಳಿದುಬರುತ್ತದೆ.
ದೇಶದ ಒಟ್ಟು ಭಿನ್ನಸಾಮರ್ಥ್ಯದ ಮಕ್ಕಳ ಪೈಕಿ ಶೇ.8.45 ಮಂದಿ ಆಂಧ್ರದಲ್ಲಿದ್ದರೆ, ಡಿಡಿಆರ್‌ಎಸ್ ಯೋಜನೆಯ ಶೇ.28.63 ಅನುದಾನವನ್ನು ಆಂಧ್ರ ಬಳಸಿಕೊಂಡಿದೆ. ಈ ಯೋಜನೆಯ ಸೌಲಭ್ಯ ಬಳಸಿಕೊಂಡಿರುವ ದೇಶಗಳ ಪೈಕಿ ಆಂಧ್ರಕ್ಕೆ ಅಗ್ರಸ್ಥಾನ. ಆದರೆ ಅತಿಹೆಚ್ಚು ಭಿನ್ನಸಾಮರ್ಥ್ಯದವರನ್ನು ಹೊಂದಿರುವ ಉತ್ತರ ಪ್ರದೇಶ ಬಳಸಿಕೊಂಡಿರುವುದು ಆಂಧ್ರದ ಅರ್ಧದಷ್ಟು ಅನುದಾನವನ್ನು.
ಅನುದಾನ ಅಸಮಾನತೆ
ಅಧಿಕ ಡಿಡಿಆರ್‌ಎಸ್ ಅನುದಾನ ಪಡೆದಿರುವ ರಾಜ್ಯಗಳಲ್ಲಿ ಕೇರಳಕ್ಕೆ ಎರಡನೇ ಸ್ಥಾನ. ಆದರೆ ಕೇರಳ ದೇಶದ ಒಟ್ಟು ಅಂಗವಿಕಲರ ಪೈಕಿ ಶೇ.2.84 ಪಾಲು ಹೊಂದಿದೆ. ಸರಿ ಸುಮಾರು ಇಷ್ಟೇ ಪ್ರಮಾಣದ ಅಂಗವಿಕಲರನ್ನು ಹೊಂದಿರುವ ಜಾರ್ಖಂಡ್ (2.87 ಶೇಕಡ) ಡಿಡಿಆರ್‌ಎಸ್ ಅನುದಾನದಲ್ಲಿ ಶೇ.0.13ರ ಪಾಲು ಪಡೆದಿದ್ದರೆ, ಕೇರಳ ಪಡೆದಿರುವ ಅನುದಾನ ಶೇ. 10.13. ಇದರಿಂದಾಗಿ ಡಿಡಿಆರ್‌ಎಸ್ ಅನುದಾನ ಪಡೆದ ಅಗ್ರ 15 ರಾಜ್ಯಗಳ ಪೈಕಿ ಜಾರ್ಖಂಡ್ ಸ್ಥಾನ ಪಡೆದಿಲ್ಲ. ಪಲಾನುಭವಿಗಳ ಸಂಖ್ಯೆಯಲ್ಲೂ ಜಾರ್ಖಂಡ್ ಒಟ್ಟು ಶೇ.0.28ರಷ್ಟು ಪಲಾನುಭವಿಗಳನ್ನು ಹೊಂದಿದ್ದರೆ, ಕೇರಳ ಶೇ.4.52ರಷ್ಟು ಪಲಾನುಭವಿಗಳನ್ನು ಹೊಂದಿದೆ.
ಎರಡೂ ರಾಜ್ಯಗಳು ಕ್ರಮವಾಗಿ 3.3 ಕೋಟಿ ಹಾಗೂ 3.2 ಕೋಟಿ ಜನಸಂಖ್ಯೆ ಹೊಂದಿದ್ದು, ಭಿನ್ನಸಾಮರ್ಥ್ಯದವರ ಆರೈಕೆ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಮಾತ್ರ ಎರಡು ರಾಜ್ಯಗಳ ನಡುವೆ ದೊಡ್ಡ ಅಂತರ ಇದೆ. ಈ ಬಾರಿ ಅಸಮಾನತೆಗೆ ಕಾರಣ ಆಯಾ ರಾಜ್ಯ ಸರಕಾರಗಳ ನಿರ್ಲಕ್ಷ ಎಂದು ಜೈಪುರ ಮೂಲದ ಭಿನ್ನಸಾಮರ್ಥ್ಯದ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಉಮಂಗ್‌ನ ನಿರ್ದೇಶಕ ದೀಪಕ್ ಕಲ್ರಾ ಹೇಳುತ್ತಾರೆ.
ಅಂತೆಯೇ ರಾಷ್ಟ್ರೀಯ ಭಿನ್ನಸಾಮರ್ಥ್ಯದವರ ಸಂಖ್ಯೆ ಒಡಿಶಾ ಹಾಗೂ ತಮಿಳುನಾಡಿನಲ್ಲೂ ಸರಿಸುಮಾರು ಒಂದೇ ಆಗಿದೆ. ದೇಶದ ಒಟ್ಟು ಭಿನ್ನಸಾಮರ್ಥ್ಯದ ಮಕ್ಕಳ ಪೈಕಿ ಎರಡೂ ರಾಜ್ಯಗಳ ಪಾಲು ಕ್ರಮವಾಗಿ ಶೇ.4/64 ಹಾಗೂ 4.4. ಅದಾಗ್ಯೂ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಒಡಿಶಾ ಸ್ವೀಕರಿಸಿದ ಒಟ್ಟು ಅನುದಾನದ ಅರ್ಧದಷ್ಟನ್ನು ಮಾತ್ರ ತಮಿಳುನಾಡು ಪಡೆಯುವುದು ಸಾಧ್ಯವಾಗಿದೆ. ಒಡಿಶಾ ತಲುಪಲು ಸಾಧ್ಯವಾಗಿರುವ ಅಂಗವಿಕಲರ ಸಂಖ್ಯೆ (ಶೇ.5.89)ಗೆ ಹೋಲಿಸಿದರೆ ತಮಿಳುನಾಡು ದುಪ್ಪಟ್ಟು (ಶೇ.12.13) ಅಂಗವಿಕಲರನ್ನು ತಲುಪಲು ಸಾಧ್ಯವಾಗಿದೆ.
ಭಿನ್ನಸಾಮರ್ಥ್ಯದ ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಪಾಟ್ನಾ ಮೂಲದ ಸಮರ್ಪಕ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಸಂಜೀವಿ ಕುಮಾರ್ ಅವರು, ಹೇಗೆ ಉತ್ತಮ ಆಡಳಿತವನ್ನು ಹೊಂದಿರುವ ರಾಜ್ಯಗಳು ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯವಾಗಿದೆ ಎಂದು ವಿವರಿಸುತ್ತಾರೆ.
ಡಿಡಿಆರ್‌ಎಸ್ ಅನುದಾನದ ಎಲ್ಲ ಪ್ರಸ್ತಾವನೆಗಳು ಜಿಲ್ಲೆ ಹಾಗೂ ರಾಜ್ಯ ಹಂತದ ಮೂಲಕ ಕೇಂದ್ರಕ್ಕೆ ಸಲ್ಲಿಕೆಯಾಗಬೇಕಾಗುತ್ತದೆ. ಆನ್‌ಲೈನ್ ಅರ್ಜಿಗಳ ಸಲ್ಲಿಕೆಗೆ ಕೂಡಾ ರಾಜ್ಯದ ಅನುದಾನ ಸಮಿತಿಯ ಮಂಜೂರಾತಿ ಬೇಕಾಗುತ್ತದೆ. ಈ ಕೆಂಪುಪಟ್ಟಿ ಹಾಗೂ ಅಧಿಕಾರಿಗಳ ಭಾವಸೂಕ್ಷ್ಮತೆಯ ಕೊರತೆಯಿಂದಾಗಿ ದಿಲ್ಲಿಗೆ ಪ್ರಸ್ತಾವನೆಗಳು ಸಲ್ಲಿಕೆಯಾಗುವುದು ವಿಳಂಬವಾಗುತ್ತದೆ. ಇದರಿಂದಾಗಿ ಬಹುತೇಕ ಹಣ ಬಳಕೆಯಾಗದೇ ವಾಪಸಾಗುತ್ತದೆ. ಇದನ್ನು ಮುಂದಿನ ವರ್ಷ ಮುಂದುವರಿಸಲು ಸಾಧ್ಯವಾಗದಿರುವುದರಿಂದ ಬಹಳಷ್ಟು ರಾಜ್ಯಗಳ ಅನುದಾನ ವಾಪಸಾಗುತ್ತದೆ ಎಂದು ಕುಮಾರ್ ವಿವರಿಸುತ್ತಾರೆ. ಆದ್ದರಿಂದ ದುರ್ಬಲ ಆಡಳಿತದ ರಾಜ್ಯಗಳ ಅಂಗವಿಕಲರು ನಷ್ಟ ಅನುಭವಿಸಬೇಕಾಗುತ್ತದೆ.
(ಕೃಪೆ: ಇಂಡಿಯಾಸ್ಪೆಂಡ್.ಕಾಮ್)