ಕಲಂ 377ನ್ನು ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತರ ಪ್ರತಿಭಟನೆ

ಬೆಂಗಳೂರು, ಫೆ.1: ಲೈಂಗಿಕ ಅಲ್ಪ ಸಂಖ್ಯಾತರಿಗೆ ಮಾರಕವಾಗಿರುವ ಕಲಂ 377 ನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಬಾರದೆಂದು ಒತ್ತಾಯಿಸಿ ನಗರದ ಕಬ್ಬನ್ ಉದ್ಯಾನವನದಲ್ಲಿ ಲೈಂಗಿಕ ಅಲ್ಪ ಸಂಖ್ಯಾತರು ಪ್ರತಿಭಟನೆ ನಡೆಸಿದರು.
ಕಲಂ 377 ಸಲಿಂಗ ಕಾಮವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಇದು ಲೈಂಗಿಕ ಅಲ್ಪಸಂಖ್ಯಾತರ ಜೀವ ವನ್ನೇ ತೆಗೆದ ರೀತಿಯಾಗಿದೆ. ಪರಿಸ್ಪರ ಒಪ್ಪಿಗೆ ಮೇರೆಗೆ ನಡೆಯುವ ಸಲಿಂಗ ಕಾಮವನ್ನು ವಿರೋಧಿಸುವುದು ಸರಿಯಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಕಲಂ 377ನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದೆಂದು ಲೈಂಗಿಕ ಅಲ್ಪಸಂಖ್ಯಾತೆ ಉಮಾದೇವಿ ತಿಳಿಸಿದರು.
ಬ್ರಿಟಿಷರು ಆಳ್ವಿಕೆಯ ಅವಧಿಯಲ್ಲಿ ಕಲಂ 377ನ್ನು ಜಾರಿಗೆ ತರಲಾಯಿತು. ಆದರೆ, ಇಂಗ್ಲೆಂಡ್‌ನಲ್ಲಿ ಈ ಕಾನೂನನ್ನು ತೆಗೆದು ಹಾಕಲಾಗಿದೆ. ಭಾರತದಲ್ಲಿ ಮಾತ್ರ ಕೆಲವು ಮೂಲಭೂತವಾದಿಗಳ ಉಪಟಳದಿಂದಾಗಿ ಕಲಂ 377ನ್ನು ಜಾರಿ ಮಾಡಲು ಸುಪ್ರೀಂ ಕೋರ್ಟ್ ಮುಂದಾಗಿರುವುದು ಸರಿಯಲ್ಲ. ಒಂದು ವೇಳೆ ಈ ಕಾನೂನು ಜಾರಿಯಾದರೆ ರಾಷ್ಟ್ರದಾದ್ಯಂತ ಹೋರಾಟ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.





