ಜಿಪಂ-ತಾಪಂ ಚುನಾವಣೆ: ವೇತನ ಸಹಿತ ರಜೆ ಘೋಷಿಸಲು ರಾಜ್ಯ ಸರಕಾರದ ಸೂಚನೆ
ಬೆಂಗಳೂರು, ಫೆ. 1: ರಾಜ್ಯದ ಮೂವತ್ತು ಜಿಲ್ಲೆಗಳ 1,083 ಜಿಲ್ಲಾ ಮತ್ತು 175 ತಾಪಂಗಳ 3,884 ಕ್ಷೇತ್ರಗಳಿಗೆ ಫೆ.13ರ ಶನಿವಾರ ಮತ್ತು ಫೆ.20ರ ಶನಿವಾರ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ವೇತನ ಸಹಿತ ರಜೆ ಘೋಷಿಸಲು ಸರಕಾರದ ಅಧೀನ ಕಾರ್ಯದರ್ಶಿ ಡಾ.ಬಿ.ಎಸ್.ಮಂಜುನಾಥ್ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲ ಸರಕಾರಿ ಕಚೇರಿಗಳು, ಸರಕಾರಿ ಹಾಗೂ ಖಾಸಗಿ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು ಮತದಾನದ ದಿನ ರಜೆ ನೀಡಬೇಕು ಎಂದು ತಿಳಿಸಲಾಗಿದೆ.
ಅಲ್ಲದೆ, ಮತದಾನಕ್ಕೆ ಮತಗಟ್ಟೆಗಳನ್ನು ಸರಕಾರಿ ಕಚೇರಿ ಹಾಗೂ ಸರಕಾರಿ ಶಾಲೆಗಳಲ್ಲಿ ಸ್ಥಾಪಿಸಿದ್ದಲ್ಲಿ ಅಂತಹ ಕಚೇರಿ ಹಾಗೂ ಶಾಲೆಗಳಿಗೆ ಫೆ.12ರ ಶುಕ್ರವಾರ ಹಾಗೂ ಫೆ.19ರಂದು (ಪೂರ್ವ ತಯಾರಿಗಾಗಿ) ಹಾಗೂ ಅವಶ್ಯವಿದ್ದಲ್ಲಿ ಮತದಾನ ಮತ್ತು ಎಣಿಕೆ ನಡೆಯುವ ಕೇಂದ್ರಕ್ಕೆ ಮಾತ್ರ ರಜೆ ಘೋಷಿಸಲು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ರಜೆ ನೀಡಲು ಆದೇಶ: ಚುನಾವಣೆ ಹಿನ್ನೆಲೆಯಲ್ಲಿ ಆಯಾ ವ್ಯಾಪ್ತಿಯಲ್ಲಿನ ಕೇಂದ್ರ ಸರಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಜೀವವಿಮಾ ನಿಗಮ ಸೇರಿ ಇನ್ನಿತರ ಕಚೇರಿಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆ ಘೋಷಿಸಬೇಕು. ಅಲ್ಲದೆ, ದಿನಗೂಲಿ ನೌಕರರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ತಿಳಿಸಲಾಗಿದೆ.





