ಆಂಧ್ರದಲ್ಲೊಂದು ನಕಲಿ ಪ್ರತಿಭಟನೆ
ದುರ್ಬಲರಿಗಾಗಿ, ಶೋಷಿತರಿಗಾಗಿ ಹಮ್ಮಿಕೊಂಡಿರುವ ಮೀಸಲಾತಿಯ ವಿರುದ್ಧದ ಸಂಚು ಮುಂದುವರಿಯುತ್ತಲೇ ಇದೆ. ಈವರೆಗೆ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಈ ಚಳವಳಿ ಇದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಜಾಟ್, ಪಟೇಲ್‌ನಂತಹ ಮೇಲ್ವರ್ಗದ ಜನರು ತಮಗೂ ಮೀಸಲಾತಿ ಬೇಕು ಎಂದು ಬೀದಿಗಿಳಿದು, ದೇಶದಲ್ಲಿ ಅರಾಜಕತೆ ಸೃಷ್ಟಿಸಿದ್ದು ನಮಗೆ ಗೊತ್ತೇ ಇದೆ. ದೇಶದ ರಾಜಕೀಯ, ಉದ್ಯಮ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಈ ಜನರು ಪ್ರಾಬಲ್ಯವನ್ನು ಪಡೆದಿದ್ದರೂ, ತಳಮಟ್ಟದ ಜನರು ತಮ್ಮ ಸ್ಥಾನಕ್ಕೇರುತ್ತಾರೆ ಎಂಬ ಒಂದೇ ಅಸೂಯೆಯಿಂದ, ಅದನ್ನು ತಡೆಯುವುದಕ್ಕಾಗಿ ತಮಗೂ ಮೀಸಲಾತಿ ಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ನಿಮಗೆ ಮೀಸಲಾತಿ ಕೊಡಬೇಕು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ಮೀಸಲಾತಿ ನೀಡಿ ತಮ್ಮ ಸಮುದಾಯವನ್ನು ಮೇಲೆತ್ತಬೇಕಾದ ಸನ್ನಿವೇಶ ವರ್ತಮಾನದಲ್ಲಿ ಇದೆಯೇ ಎಂಬ ಪ್ರಶ್ನೆಗೂ ಅವರು ಉತ್ತರ ಕೊಡುವ ಸ್ಥಿತಿಯಲ್ಲಿಲ್ಲ. ತಮ್ಮ ಜನಬಲವನ್ನು, ಹಣ ಬಲವನ್ನು ಮುಂದಿಟ್ಟುಕೊಂಡು ಅವರು ಸರಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮೇಲ್ವರ್ಗದ ಈ ಚಳವಳಿಗೆ ಗುಟ್ಟಾಗಿ ಆರೆಸ್ಸೆಸ್‌ನಂತಹ ಸಂಘಟನೆಗಳು ಬೆಂಬಲ ನೀಡುತ್ತಿರುವುದೂ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತಿವೆೆ. ಒಟ್ಟಿನಲ್ಲಿ ಮೀಸಲಾತಿ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿ, ಕಟ್ಟಕಡೆಗೆ ಯಾರಿಗೂ ಮೀಸಲಾತಿ ಬೇಡ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು ಆರೆಸ್ಸೆಸ್‌ನಂತಹ ಸಂಘಟನೆಗಳ ಉದ್ದೇಶವಾಗಿದೆ. ಅವರ ಅಂತಿಮ ಗುರಿ, ಸಾಮಾಜಿಕ ನ್ಯಾಯವನ್ನೇ ಇಲ್ಲವಾಗಿಸುವುದು. ಮೇಲ್ವರ್ಣ, ಮೇಲ್ವರ್ಗಕ್ಕೂ ಮೀಸಲಾತಿ ನೀಡಿದ ಬಳಿಕ, ದಲಿತರಿಗೆ ನೀಡುವ ಮೀಸಲಾತಿಗೆ ಏನು ಅರ್ಥ ಉಳಿಯಿತು? ಎಲ್ಲ ವರ್ಗದವರಿಗೂ ಮೀಸಲಾತಿ ನೀಡುವುದು ಮತ್ತು ಯಾರಿಗೂ ಮೀಸಲಾತಿ ನೀಡದೇ ಇರುವುದು ಇವುಗಳಲ್ಲಿ ವ್ಯತ್ಯಾಸವಿಲ್ಲ. ಆದುದರಿಂದ ಮೇಲ್ನೋಟಕ್ಕೆ ಇದೊಂದು ತುಳಿತಕ್ಕೊಳಗಾದವರ ಚಳವಳಿಯಂತೆ ಭಾಸವಾದರೂ, ಆಳದಲ್ಲಿ ತುಳಿತಕ್ಕೊಳಗಾದವರ ವಿರುದ್ಧ ನಡೆಯುತ್ತಿರುವ ಚಳವಳಿಯಾಗಿದೆ. ಒಂದೆಡೆ ದೇಶಾದ್ಯಂತ ದಲಿತರ ಮೇಲೆ, ಶೋಷಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಮೀಸಲಾತಿ ದಲಿತರಿಗೆ ನ್ಯಾಯ ಕೊಡುತ್ತಿಲ್ಲ ಎನ್ನುವ ಕೂಗು ಜೋರಾಗಿದೆ. ಇದರ ಬೆನ್ನಿಗೇ ಇರುವ ಮೀಸಲಾತಿಯನ್ನೇ ತೆಗೆದುಹಾಕಿ ಅವರನ್ನು ಇನ್ನಷ್ಟು ಅತಂತ್ರರನ್ನಾಗಿಸುವ, ಅವರ ಧ್ವನಿಯನ್ನು ಸಂಪೂರ್ಣ ಅಡಗಿಸುವ ಭಾಗವಾಗಿ, ಮೇಲ್ವರ್ಗದ ಜನ ಮೀಸಲಾತಿಗಾಗಿ ಬೀದಿಗಿಳಿದಿದ್ದಾರೆ.
ಜಾಟ್, ಪಟೇಲರು, ಗುಜ್ಜರರಿಂದ ಆರಂಭವಾದ ಈ ಮೀಸಲಾತಿ ಹೋರಾಟ ಇದೀಗ ಆಂಧ್ರಕ್ಕೆ ವಿಸ್ತರಿಸಿದೆ. ಆಂಧ್ರದ ಹೋರಾಟದ ಹಿಂದಿರುವ ರಾಜಕೀಯ ಉತ್ತರ ಭಾರತದ ರಾಜಕೀಯಕ್ಕಿಂತ ಭಿನ್ನವಾದುದು. ಆಂಧ್ರಪ್ರದೇಶದಲ್ಲಿ ಶೇ.27ರಷ್ಟು ಕಾಪು ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಇವರು ಕರ್ನಾಟಕದಲ್ಲಿರುವ ಒಕ್ಕಲಿಗರಷ್ಟೇ ಸಬಲರು. ಭೂಮಾಲಕ ವರ್ಗದವರು. ಕಳೆದ ಚುನಾವಣೆಯ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ಅವರು ರಾಜಕೀಯ ಕಾರಣಕ್ಕಾಗಿ ಮೀಸಲಾತಿಯ ಭರವಸೆಯನ್ನು ನೀಡಿದ್ದಾರೆ. ಆಂಧ್ರ,ತೆಲಂಗಾಣ ಜಾತಿ ದೌರ್ಜನ್ಯಗಳಿಗಾಗಿ ದೇಶಾದ್ಯಂತ ಕುಖ್ಯಾತಿ ಪಡೆಯುತ್ತಿರುವ ಈ ಸಂದರ್ಭದಲ್ಲಿ, ಕಾಪು ಸಮುದಾಯ ಮೀಸಲಾತಿಗಾಗಿ ಬೀದಿಗಿಳಿದಿದೆ. ಬರೇ ಪ್ರತಿಭಟನೆ ನಡೆಸಿರುವುದಲ್ಲ. ಹಿಂಸಾತ್ಮಕ ಕೃತ್ಯಗಳನ್ನು ಎಸಗಿವೆ. ರೈಲು ಬೋಗಿಗಳಿಗೆ ಬೆಂಕಿ ಹಚ್ಚಿವೆ. ಹಲವರು ಗಾಯಗೊಂಡಿದ್ದಾರೆ. ಇಂತಹದೊಂದು ಹಿಂಸಾತ್ಮಕ ಪ್ರತಿಭಟನೆಗೆ ಕಾಪು ಸಮುದಾಯ ಏಕಾಏಕಿ ಇಳಿದಿರುವುದೇಕೆ? ಈ ವರೆಗೆ ವೌನವಾಗಿದ್ದವರು ಒಮ್ಮೆಲೆ ಬೀದಿಗಿಳಿದು ಪ್ರತಿಭಟನೆ ನಡೆಸಿರುವುದು ಯಾಕೆ? ಸೂಕ್ಷ್ಮವಾಗಿ ಈ ಪ್ರಕರಣವನ್ನು ಗಮನಿಸಿದರೆ, ಅವರ ಉದ್ದೇಶ ಸಮುದಾಯದ ಉದ್ಧಾರವಲ್ಲ. ಬದಲಿಗೆ, ಈಗಾಗಲೇ ಆಂಧ್ರದಾದ್ಯಂತ ಹಬ್ಬಿರುವ ವೇಮುಲಾ ವಿರುದ್ಧದ ಪ್ರತಿಭಟನೆಯನ್ನು ತಣ್ಣಗಾಗಿಸುವುದು. ಮತ್ತು ಜನರ ಗಮನವನ್ನು ದಲಿತರ ಕಡೆಯಿಂದ ಇನ್ನೊಂದೆಡೆಗೆ ಸೆಳೆಯುವುದು. ಹೌದು. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ದಲಿತ ಸಂಶೋಧಕನ ಆತ್ಮಹತ್ಯೆ ಕೇವಲ ಸ್ಥಳೀಯ ಸರಕಾರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ತಲೆನೋವಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ದೇಶದ ದಲಿತರನ್ನೆಲ್ಲ ಮತ್ತೆ ಒಟ್ಟು ಸೇರಿಸುತ್ತಿವೆ. ವಿದ್ಯಾರ್ಥಿಗಳು ಆಕ್ರೋಶಗೊಂಡು ಬೀದಿಗಿಳಿಯುತ್ತಿದ್ದಾರೆ. ಸಂಘಪರಿವಾರಕ್ಕೂ ಈ ಚಳವಳಿ ತೀವ್ರ ಇರಿಸುಮುರಿಸು ಉಂಟು ಮಾಡಿದೆ. ‘ನಾವೆಲ್ಲ ಹಿಂದೂ-ಒಂದು’ ಎನ್ನುವ ಅದರ ಮುಖವಾಡ ಸಾರ್ವಜನಿಕವಾಗಿ ಕಳಚಿ ಬಿದ್ದಿದೆ. ಈ ಚಳವಳಿಯನ್ನು ಮಟ್ಟ ಹಾಕಲು ಬೇರೆ ಬೇರೆ ತಂತ್ರಗಳನ್ನು ರಾಜಕೀಯ ನಾಯಕರು ಹುಡುಕುತ್ತಿದ್ದಾರೆ. ವೇಮುಲಾ ಆತ್ಮಹತ್ಯೆಗೆ ಜಾತಿ ದೌರ್ಜನ್ಯ ಕಾರಣ ಅಲ್ಲ ಎನ್ನುವುದನ್ನು ಸಾಬೀತು ಪಡಿಸಲು ಹರಸಾಹಸ ಮಾಡುತ್ತಿದ್ದಾರೆ. ಸುಷ್ಮಾ ಸ್ವರಾಜ್ ಅವರು ‘‘ವೇಮುಲಾ ದಲಿತ ಅಲ್ಲ’’ ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೊಳಗಾದರು. ಒಂದೆಡೆ ಆತನ ತಾಯಿ ದಲಿತ ಎನ್ನುವುದನ್ನು ಒಪ್ಪಿಕೊಳ್ಳುವ ಸಚಿವೆ, ಮಗದೊಂದೆಡೆ ಆತ ದಲಿತ ಅಲ್ಲ ಎಂದೂ ಹೇಳುತ್ತಾರೆ. ಆ ಮೂಲಕ, ಇದು ಜಾತಿ ದೌರ್ಜನ್ಯಕ್ಕೆ ಸಂಬಂಧಿಸಿ ನಡೆದ ಆತ್ಮಹತ್ಯೆ ಅಲ್ಲ ಎನ್ನುವುದನ್ನು ನಿರೂಪಿಸುವುದು ಅವರ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಹೈದರಾಬಾದ್‌ನ್ನು ಕೇಂದ್ರವಾಗಿಟ್ಟುಕೊಂಡು ಐಸಿಸ್ ಸಂಪರ್ಕದ ಆರೋಪದಲ್ಲಿ ಹಲವು ಮುಸ್ಲಿಮ್ ಯುವಕರನ್ನು ಕೇಂದ್ರ ಸರಕಾರ ಬಂಧಿಸಿತು. ಜನರ ಚರ್ಚೆ ಜಾತಿ ದೌರ್ಜನ್ಯದಿಂದ, ಭಯೋತ್ಪಾದನೆಯ ಕಡೆಗೆ ಹರಿಯಲಿ ಎನ್ನುವ ಉದ್ದೇಶವೂ ಈ ಅನಿರೀಕ್ಷಿತ ಬಂಧನದ ಹಿಂದಿತ್ತು. ಆದರೆ ಸರಕಾರದ ಎಲ್ಲ ಯತ್ನಗಳ ನಡುವೆಯೂ ವೇಮುಲಾ ಪರವಾದ ಚಳವಳಿ ದೇಶಾದ್ಯಂತ ಬೆಂಕಿಯಂತೆ ಹರಡುತ್ತಿದೆ. ದಿಲ್ಲಿಯಲ್ಲಿ ಚಳವಳಿ ನಡೆಸುತ್ತಿರುವ ಯುವಕರ ಮೇಲೆ ಪೊಲೀಸರು ಮತ್ತು ಆರೆಸ್ಸೆಸ್ ಗೂಂಡಾಗಳು ಜೊತೆಯಾಗಿ ದಾಳಿ ಮಾಡಿರುವ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಜನರು ಸರಕಾರದ ವಿರುದ್ಧ ದಂಗೆಯೇಳುವ ಸ್ಥಿತಿಯಲ್ಲಿದ್ದಾರೆ. ಇದೀಗ ದಲಿತರ ವಿರುದ್ಧ ಸರಕಾರ ಆಂಧ್ರದಲ್ಲಿ ಕಾಪು ಸಮುದಾಯವನ್ನು ಪ್ರತಿಯಾಗಿ ಬಿಟ್ಟಿದೆ. ಕಾಪು ಸಮುದಾಯ ಏಕಾಏಕಿ ಬೀದಿಗಿಳಿದು ಹಿಂಸೆಗಿಳಿದಿರುವುದರ ಹಿಂದೆ, ದಲಿತರ ಹೋರಾಟಗಳನ್ನು ದಮನಿಸುವ ತಂತ್ರವಿದೆ. ಅದೇನೇ ಆದರೂ ಸದ್ಯಕ್ಕಂತೂ ವೇಮುಲಾ ಪರವಾದ ಹೋರಾಟ ತಣಿಯುವ ಸಾಧ್ಯತೆಗಳಿಲ್ಲ್ಲ. ಸರಕಾರದ ಎಲ್ಲ ತಂತ್ರಗಳು ವಿಫಲಗೊಂಡು ಚಳವಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಸಂಘ ಪರಿವಾರದ ಹಿಂದುತ್ವದ ಭ್ರಮೆಗಳು ಕಳಚಿ ಬೀಳುತ್ತಿವೆ. ಈ ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದ ಜನರು ಮತ್ತೆ ಒಂದಾಗಿ ತಮ್ಮ ಹಕ್ಕುಗಳಿಗೆ ಸಂಘಟಿತ ಹೋರಾಟ ನಡೆಸುವ ಎಲ್ಲ ಸೂಚನೆಗಳು ಕಾಣುತ್ತಿವೆ. ಈ ಹೋರಾಟದ ಸಂದರ್ಭದಲ್ಲಿ ಸರಕಾರ, ವ್ಯವಸ್ಥೆಗಳು ಹೂಡುವ ಸಂಚು, ತಂತ್ರಗಳನ್ನು ಅರ್ಥ ಮಾಡಿಕೊಂಡು ಹೆಜ್ಜೆಗಳನ್ನು ಮುಂದಿಡುವುದು ಅತ್ಯಗತ್ಯವಾಗಿದೆ.







