ಮಾಧ್ಯಮಗಳು ಸತ್ಯ ಹೇಳಲಿ
ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಸತ್ಯ ಹೇಳುವ ಜಾಗ ಇಲ್ಲವಾಗಿದೆ. ಸಮಾಜದಲ್ಲಿ ಶೇ.1ರಷ್ಟಿರುವ ಮೇಲ್ವರ್ಗದವರಿಗೆ ಬೇಕಿರುವಂತಹ ಸುದ್ದಿಗಳೇ ರಾರಾಜಿಸುತ್ತಿದ್ದು, ಶೇ.99ರಷ್ಟಿಸುವ ಹಿಂದುಳಿದವರ ಸಮಸ್ಯೆಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿಲ್ಲ. ಅಲ್ಲದೆ ಭಯೋತ್ಪಾದನೆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳಲ್ಲಿ ಮೊದಲ ತನಿಖೆಯಾಗುತ್ತಿದೆ. ನಂತರ ನ್ಯಾಯಾಲಯದಲ್ಲಿ ತನಿಖೆಯಾಗುತ್ತಿದೆ. ಸ್ಫೋಟಕ ಸುದ್ದಿಯ ಭರಾಟೆಯಲ್ಲಿ ಮುಗ್ಧನೊಬ್ಬನ ಬಗ್ಗೆ ಅತಿರಂಜಿತವಾಗಿ ಸುದ್ದಿ ಮಾಡುವ ಮಾಧ್ಯಮಗಳು, ಆತ ನಿರಪರಾಧಿ ಎಂದು ಹೊರ ಬಂದಾಗ, ವೌನ ತಾಳುತ್ತವೆ.
ಇಂದಿನ ಬಹುತೇಕ ಮಾಧ್ಯಮಗಳು ಮೇಲ್ವರ್ಗದವರಿಂದಲೇ ನಿಯಂತ್ರಿಸಲ್ಪಡುತ್ತಿದ್ದು, ಅವುಗಳಿಂದ ವಿಮುಕ್ತಿಯಾಗುವವರೆಗೂ ಹಿಂದುಳಿದವರಿಗೆ ಸ್ವಾತಂತ್ರ ಲಭಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಕೆಳ ವರ್ಗದವರೂ ಕೂಡ ಮಾಧ್ಯಮ ಕ್ಷೇತ್ರಗಳತ್ತ ಗಮನ ಹರಿಸಿ ಸತ್ಯವನ್ನು ಧೈರ್ಯದಿಂದ ನುಡಿಯುವ ಕೆಲಸವನ್ನು ಮಾಡಬೇಕಿದೆ. ಬಹುತೇಕ ಮಾಧ್ಯಮಗಳ ವೃಭವಪೂರಿತ ಸುದ್ದಿ ಪ್ರಕಟನೆಯಿಂದಾಗಿ ಜನಸಮಾನ್ಯರು ದೃಶ್ಯ ಮಾಧ್ಯಮಗಳ ಬಗ್ಗೆ ನಿರುತ್ಸಾಹ ತೋರುತ್ತಿದ್ದು ಇಂತಹ ವಾತಾವರಣದಿಂದ ಮಾಧ್ಯಮ ಕ್ಷೇತ್ರವನ್ನು ರಕ್ಷಿಸಬೇಕಿದೆ.





