ಕಾಪು ಮುಖಂಡನಿಂದ ಅನಿರ್ದಿಷ್ಟಾವಧಿ ನಿರಶನ ಬೆದರಿಕೆ
ಹೈದರಾಬಾದ್, ಫೆ.1: ಕಾಪು ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ, ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿರುವ ಜನಾಂಗದ ಮುಖಂಡ ಮುದ್ರಾಗದ ಪದ್ಮನಾಭಂ, ಅನಿರ್ದಿಷ್ಟಾವಧಿ ನಿರಶನ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಜೈಲಿಗೆ ತಳ್ಳಿದರೂ ನಿರಶನ ಮುಂದುವರಿಸುತ್ತೇನೆ. ಜನಾಂಗವನ್ನು ಅವಮಾನಿಸುವ ಸಲುವಾಗಿ ರಾಜ್ಯ ಸರಕಾರ ಭಯದ ವಾತಾವರಣ ಸೃಷ್ಟಿಸುವ ಸಂಚು ಹೂಡಿದೆ ಎಂದು ಪೂರ್ವಗೋದಾವರಿ ಜಿಲ್ಲೆಯ ಅವರು ಸುದ್ದಿಗಾರರಿಗೆ ತಿಳಿಸಿದರು.
ತುನಿಯಲ್ಲಿ ಆರಂಭವಾದ ಹಿಂಸಾಚಾರಕ್ಕೆ ಸರಕಾರಿ ಬೆಂಬಲಿತ ದುಷ್ಟಶಕ್ತಿಗಳು ಕಾರಣ. ಸಾರ್ವಜನಿಕ ಸಭೆಗಳಿಗೆ ತಡೆ ಒಡ್ಡುವ ಮೂಲಕ ಸರಕಾರ ಪ್ರತಿಭಟನೆ ಹತ್ತಿಕ್ಕುವ ಹುನ್ನಾರ ನಡೆಸಿದೆ ಎಂದು ಆಪಾದಿಸಿದರು. ಈ ರಾಜ್ಯ ಅವರ ಸಾಮ್ರಾಜ್ಯವೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಎನ್.ಚಿನ್ನರಾಜಪ್ಪ ಹಾಗೂ ಪೌರಾಡಳಿತ ಖಾತೆ ಸಚಿವ ಪಿ.ನಾರಾಯಣ ಅವರು ಪದ್ಮನಾಭಂ ಹೇಳಿಕೆಯನ್ನು ಖಂಡಿಸಿದ್ದಾರೆ. ನಿನ್ನೆಯ ಸಾರ್ವಜನಿಕ ಸಮಾರಂಭಕ್ಕೆ ಬಸ್ಸುಗಳನ್ನು ನೀಡಲು ಸರಕಾರ ಒಪ್ಪಿಗೆ ಕೊಟ್ಟಿತ್ತು ಎಂದು ಚಿನ್ನರಾಜಪ್ಪ ಸಮರ್ಥಿಸಿಕೊಂಡಿದ್ದಾರೆ. ಪದ್ಮನಾಭಂ ಅವರು ಸಾರ್ವಜನಿಕ ಸಭೆಯಲ್ಲಿ ಜನರನ್ನು ಉದ್ರೇಕಿಸಿದ್ದೇ ಹಿಂಸಾಚಾರಕ್ಕೆ ಕಾರಣ ಎಂದು ಆಪಾದಿಸಿದರು.
1990ರ ದಶಕದಲ್ಲಿ ಕೆ.ವಿಜಯಭಾಸ್ಕರ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರ ಕಾಪು ಜನಾಂಗಕ್ಕೆ ಮೀಸಲಾತಿ ನಿಗದಿಪಡಿಸುವ ಸಂಬಂಧ ಹೊರಡಿಸಿದ ಆದೇಶ ಸ್ಪಷ್ಟವಾಗಿಲ್ಲ. ಟಿಡಿಪಿ ಭರವಸೆಯಂತೆ ಜನಾಂಗಕ್ಕೆ ಮೀಸಲಾತಿ ನೀಡಲು ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯನ್ನೂ ರಚಿಸಿದೆ ಎಂದು ವಿವರಿಸಿದರು.
ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿ ಸೇರಿದಂತೆ 15 ಮಂದಿ ಪೊಲೀಸರು ನಿನ್ನೆ ನಡೆದ ಹೆದ್ದಾರಿ ತಡೆ ಹಾಗೂ ರೈಲು ತಡೆ ಚಳವಳಿ ವೇಳೆ ಗಾಯಗೊಂಡಿದ್ದಾರೆ. ರವಿವಾರ ತಡರಾತ್ರಿ ಪ್ರತಿಭಟನಾಕಾರರು ಹೆದ್ದಾರಿ ತಡೆ ವಾಪಸು ಪಡೆದರು.





