ಹೈದರಾಬಾದ್ ವಿವಿ ತರಗತಿಗಳ ಪುನರಾರಂಭ ವೇಮುಲಾ ಆತ್ಮಹತ್ಯೆ ಪ್ರಕರಣ

ಹೊಸದಿಲ್ಲಿ, ಫೆ.1: ದಲಿತ ಸಂಶೊಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಯ ಬಳಿಕ ಮುಚ್ಚಿದ್ದ ಹೈದರಾಬಾದ್ ಕೇಂದ್ರ ವಿವಿಯ ತರಗತಿಗಳು ಎರಡು ವಾರಗಳ ಬಳಿಕ ಸೊಮವಾರ ಆರಂಭಗೊಂಡಿದೆ.
ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸಹಜ ಸ್ಥಿತಿಗೆ ಮರಳಿದೆ. ಆಡಳಿತ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ವಿವಿ ವಿದ್ಯಾರ್ಥಿಗಳು ಹಿಂಪಡೆದಿದ್ದಾರೆ. ತರಗತಿಗಳ ಆರಂಭಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಆದರೆ ವಿವಿಧ ವಿದ್ಯಾರ್ಥಿ ಸಂಘಟನೆಗಳನ್ನು ಒಂದೇ ವೇದಿಕೆಯ ಅಡಿ ಒಗ್ಗೂಡಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ(ಜೆಎಸಿ) ಆಶ್ರಯದಲ್ಲಿ ವಿದ್ಯಾರ್ಥಿಗಳು ಉಪಕುಲಪತಿ ಪಿ. ಅಪ್ಪಾರಾವ್ ಅವರನ್ನು ವಜಾಗೊಳಿಸುವ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿ ಆವರಣದಲ್ಲಿ ಸರದಿಯಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
ಹಂಗಾಮಿ ಉಪಕುಲಪತಿ ಪಾರಿಸ್ವಾಮಿ ಅವರನ್ನು ರವಿವಾರ ಭೇಟಿಯಾದ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ ತಮ್ಮ ಬೇಡಿಕೆಗಳ ಈಡೇರಿಕೆಗೆ ವಿವಿ ಆಡಳಿತಕ್ಕೆ ಹತ್ತು ದಿನಗಳ ಗಡುವು ವಿಧಿಸಿದೆ.
ನಾಲ್ಕು ದಿನಗಳ ರಜೆಯಲ್ಲಿ ಕಳೆದ ಶುಕ್ರವಾರ ತೆರಳಿರುವ ವಿವಿಯ ಹಂಗಾಮಿ ಉಪಕುಲಪತಿ ಪ್ರೊ. ವಿಪಿನ್ ಶ್ರೀವಾಸ್ತವ್ ಮತ್ತೆ ಹಂಗಾಮಿ ಕುಲಪತಿಯಾಗಿ ಮುಂದುವರಿಯುವುದಕ್ಕೆ ಜೆಎಸಿ ವಿರೋಧ ವ್ಯಪಡಿಸಿದೆ. ಶ್ರೀವಾಸ್ತವ್ ನೇತೃತ್ವದ ಸಮಿತಿಯು ರೋಹಿತ್ ವೇಮುಲಾ ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿತ್ತು. ಈ ಕಾರಣದಿಂದಾಗಿ ಪ್ರೊ. ವಿಪಿನ್ ಶ್ರೀವಾಸ್ತವ್‌ಗೆ ಹಂಗಾಮಿ ಉಪಕುಲಪತಿ ಸ್ಥಾನ ನೀಡಬಾರದೆಂದು ಜಂಟಿ ಕ್ರಿಯಾ ಸಮಿತಿ ವಿವಿ ಆಡಳಿತ ಸಮಿತಿಯನ್ನು ಆಗ್ರಹಿಸಿದೆ.
ರೋಹಿತ್ ಸಾವಿನ ಹಿನ್ನೆಲೆಯಲ್ಲಿ ಹಿಂದಿನ ಉಪಕುಲಪತಿ ಪ್ರೊ. ಪಿ. ಅಪ್ಪಾರಾವ್ ಜನವರಿ 24ರಂದು ಉಪಕುಲಪತಿ ಹುದ್ದೆಯಿಂದ ಪಕ್ಕಕ್ಕೆ ಸರಿದು ರಜೆಯಲ್ಲಿ ತೆರಳಿದ್ದರು.
ತಮ್ಮನ್ನು ಭೇಟಿಯಾದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಈಗಿನ ಹಂಗಾಮಿ ಉಪಕುಲಪತಿ ಪ್ರೊ. ಪಾರಿ ಸ್ವಾಮಿ ಅವರು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲು ಅಸಾಧ್ಯ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗಳು ತಮ್ಮ ಕಾರ್ಯ ವ್ಯಾಪ್ತಿಗೆ ಬಾರದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ವಿವಿಗೆ ಆಗಮಿಸಲಿರುವ ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವಂತೆ ವಿದ್ಯಾರ್ಥಿ ಮುಖಂಡರಿಗೆ ಪ್ರೊ. ಪಾರಿಸ್ವಾಮಿ ಸಲಹೆ ನೀಡಿದ್ದಾರೆ.
ಜಂಟಿ ಕ್ರಿಯಾ ಸಮಿತಿ ಫೆಬ್ರವರಿ 4ರಂದುಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದೆ.





