ಸರಕಾರದ ಯೋಜನೆಗಳಿಗೆ ಅಧಿಕಾರಿಗಳೇ ಅಡ್ಡಗಾಲು: ಆರೋಪ
ಬೆಂಗಳೂರು, ಫೆ. 1: ಹಲವು ಯೋಜನೆಗಳ ಮೂಲಕ ಪ್ರಯೋಜ ವನ್ನು ಪಡೆಯುವ ಗ್ರಾಮೀಣ ಜನರನ್ನು ಸ್ಥಳೀಯ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆಂದು ಅಖಿಲ ಭಾರತ ದಲಿತ ಮಹಾಸಭಾ ರಾಜ್ಯಾಧ್ಯಕ್ಷ ಡಾ.ಭೀಮರಾಜು ಆರೋಪಿಸಿದರು.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದಿಂದ ಘೋಷಣೆಯಾಗುತ್ತಿರುವ ಆಶ್ರಯ ಮನೆಗಳು ಮತ್ತು ಶೌಚಾಲಯಗಳ ಯೋಜನೆಗಳು ಎಲ್ಲರಿಗೂ ಸಮರ್ಪಕವಾಗಿ ಸಿಗುತ್ತಿಲ್ಲ. ಸಾಲ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಿ 5-6 ತಿಂಗಳಾದರೂ ಸ್ಥಳೀಯ ಅಧಿಕಾರಿಗಳು ಈ ಕಡೆ ಗಮನ ನೀಡುತ್ತಿಲ್ಲ. ಜೊತೆಗೆ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾರೆ ಎಂದು ತಿಳಿಸಿದರು.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಚಿತವಾಗಿ ಬಡವರಿಗೆ ನೀಡಲಾಗಿದ್ದ ಭಾಗ್ಯ ಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಪೂರೈಕೆಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ತೆಗೆದುಹಾಕಿದೆ, ಉಳಿಸಿಕೊಂಡರೆ ಕಡ್ಡಾಯವಾಗಿ ಬಿಲ್ ಕಟ್ಟಬೇಕೆಂದು ಬೆಸ್ಕಾಂ ಒತ್ತಡ ಹೇರುತ್ತಿದೆ. ಇದರಿಂದಾಗಿ ಬಿಲ್ ಕಟ್ಟಲಾಗದವರು ಬೀದಿಗೆ ಬಂದಂತಾಗಿದೆ. ಇದರಿಂದಾಗಿ ಸರಕಾರ ಆದಷ್ಟು ಬೇಗ ಮಧ್ಯಪ್ರವೇಶ ಮಾಡಿ, ಯೋಜನೆಗಳನ್ನು ಪ್ರಚಾರಕ್ಕೆ ಮಾತ್ರ ಸೀಮಿತವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.







