ಅನುಪಮಾ ಶೆಣೈ ವರ್ಗಾವಣೆ ಖಂಡನೀಯ
ಮಂಗಳೂರು, ಫೆ.1: ಬಳ್ಳಾರಿಯ ಕೂಡ್ಲಿಗಿಯಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಪಮಾ ಶೆಣೈರನ್ನು ಎರಡೇ ದಿನದ ಅವಧಿಯಲ್ಲಿ ಶಿಕ್ಷಾ ವರ್ಗಾವಣೆ ಮಾಡಿರುವುದು ಖಂಡನೀಯ, ಸರಕಾರದ ಇಂತಹ ನೀತಿಯಿಂದ ದಕ್ಷ ಅಧಿಕಾರಿಗಳಿಗೆ ನೆಲೆಯಿಲ್ಲದಂತಾಗಿದೆ ಎಂದು ಪುತ್ತೂರಿನ ಇನ್ನರ್‌ವೀಲ್ ಕ್ಲಬ್ ಉಪಾಧ್ಯಕ್ಷೆ ಲಲಿತಾ ಎಸ್. ಭಟ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಕರೆಯನ್ನು ಹೋಲ್ಡ್ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಗೆ ಈ ರೀತಿ ಶಿಕ್ಷೆ ನೀಡುವುದಾದರೆ ಈ ಸಮಾಜದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಸಂಶಯ ಮೂಡುತ್ತದೆ. ಒಬ್ಬ ಮಹಿಳಾ ಅಧಿಕಾರಿಗೆ ಈ ರೀತಿಯ ಕಿರುಕುಳ ನೀಡುವ ಮೂಲಕ ಮಹಿಳಾ ಅಧಿಕಾರಿಗಳ ವಲಯದಲ್ಲಿ ಆತಂಕ ಸೃಷ್ಟಿಸಿರುವ ಸಚಿವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದಕ್ಷ ಹಾಗೂ ಮಹಿಳಾ ಅಧಿಕಾರಿಗೆ ಉಂಟಾಗಿರುವ ತೊಂದರೆಯ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಮಂಗಳೂರಿನ ಇನ್ನರ್ ವೀಲ್ ಕ್ಲಬ್‌ನ ಚಿತ್ರಾ ರಾವ್, ಸಮಾತಾ ಮಹಿಳಾ ಬಳಗದ ರಮಾಮಣಿ, ಭಗಿನಿ ಸಮಾಜದ ವಜ್ರರಾವ್ ಉಪಸ್ಥಿತರಿದ್ದರು.





