ಗುತ್ತಿಗೆ ವಾಹನ ಚಾಲಕರನ್ನು ಖಾಯಂಗೊಳಿಸಲು ಒತ್ತಾಯ
ಬೆಂಗಳೂರು, ಫೆ.1: ಸರಕಾರ ವಿವಿಧ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಾಹನ ಚಾಲಕರನ್ನು ಖಾಯಂ ಮಾಡಬೇಕೆಂದು ರಾಜ್ಯ ಸರಕಾರ ಹಾಗೂ ಸ್ವಾಮ್ಯ ಸಂಘ, ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ವೇಣುಕುಮಾರ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ವಿವಿಧ ಇಲಾಖೆಗೆ ಅಗತ್ಯವಿರುವ ವಾಹನ ಚಾಲಕರನ್ನು ನೇಮಿಸಿಕೊಳ್ಳಲು ಗುತ್ತಿಗೆದಾರರಿಗೆ ಪರವಾನಿಗೆ ನೀಡಲಾಗಿದೆ. ಇದರಿಂದ ಗುತ್ತಿಗೆದಾರರು ಅತ್ಯಂತ ಕಡಿಮೆ ಸಂಬಳವನ್ನು ನೀಡಿ ವಾಹನ ಚಾಲಕರನ್ನು ನೇಮಿಸಿಕೊಂಡು ಶೋಷಿಸುತ್ತಿದ್ದಾರೆಂದು ಆರೋಪಿಸಿ ದರು.
ಸರಕಾರ ಪ್ರತೀ ವಾಹನ ಚಾಲಕರಿಗೆ 16 ಸಾವಿರ ರೂ.ವೇತನ ನಿಗದಿಪಡಿಸಿದೆ. ಆದರೆ, ಗುತ್ತಿಗೆದಾರರು ವಾಹನ ಚಾಲಕರಿಗೆ ಕೊಡುತ್ತಿರುವುದು ಕೇವಲ 11 ಸಾವಿರ. ಉಳಿದ ಹಣವನ್ನು ಗುತ್ತಿಗೆದಾರ ಪಡೆಯುತ್ತಿದ್ದಾನೆ. ಇದು ಕಾನೂನು ವಿರೋಧಿ ಕೃತ್ಯವಾಗಿದ್ದು, ಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದರು.
ಗುತ್ತಿಗೆದಾರರು ವಾಹನ ಚಾಲಕರಿಗೆ ಸಂಬಳದಲ್ಲಿ ಭವಿಷ್ಯನಿಧಿ (ಪಿಎಫ್)ಎಂದು ಹಣವನ್ನು ಪಡೆದು. ಆ ಹಣವನ್ನು ಬ್ಯಾಂಕ್‌ಗೆ ಹಾಕದೆ ವಂಚಿಸುತ್ತಿದ್ದಾರೆ. ಈ ಕುರಿತು ವಾಹನ ಚಾಲಕರು ಪ್ರಶ್ನಿಸಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕುತ್ತಾರೆ. ವಿಧಿಯಿಲ್ಲದೆ ವಾಹನ ಚಾಲಕರು ಕೆಲಸ ಮಾಡಬೇಕಾದ ಅನಿವಾರ್ಯ ತೆಯಲ್ಲಿ ಸಿಲುಕಿದ್ದಾ ರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಸೇವೆ ಮಾಡುವ ವಾಹನ ಚಾಲಕರನ್ನು ಶೋಷಣೆ ಮಾಡುತ್ತಿರುವ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ಎಲ್ಲ ಕಾರು ಚಾಲಕರನ್ನು ಖಾಯಂ ಮಾಡಬೇಕು. ಈ ಕುರಿತು ಸರಕಾರ ಶೀಘ್ರವಾಗಿ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದೆಂದು ಅವರು ತಿಳಿಸಿದರು.
ಈ ವೇಳೆ ವಾಹನ ಚಾಲಕರ ಒಕ್ಕೂಟದ ಗೌರವ ಅಧ್ಯಕ್ಷ ರಾಮಕೃಷ್ಣ, ಕಾನೂನು ಸಲಹೆಗಾರ ಮುರಳೀಧರ್ ಪಡುಬಿದ್ರೆ, ಉಪಾಧ್ಯಕ್ಷ ಜಿ.ಮಣಿ, ಉಪಾಧ್ಯಕ್ಷ ಮನ್ಮಥ್ ಕುಮಾರ್ ಮತ್ತಿತರರಿದ್ದರು.







