ಸಿಪಿಎಂ ಪಕ್ಷವನ್ನು ಬೆಂಬಲಿಸಿ: ಶ್ರೀರಾಮ ರೆಡ್ಡಿ ಕರೆ
.gif)
ಬೆಳ್ತಂಗಡಿ, ಫೆ.1: ದಲಿತರ, ಶೋಷಿತರ ಮೇಲೆ ದಾಳಿಗಳು ನಡೆದಾಗ ಕೈಕಟ್ಟಿ ಕುಳಿತು ನೋಡುತ್ತಿದ್ದ ಕಾಂಗ್ರೆಸ್ ಮತ್ತು ಬಿಜೆಪಿಗರು ಚುನಾವಣೆ ಬಂದಾಗ ಜನರ ಮುಂದೆ ಬಂದು ನಾಟಕವಾಡುತ್ತಿದ್ದಾರೆ. ಹಾಗಾಗಿ ಜನಪರವಾಗಿ ಹೋರಾಟ ನಡೆಸುವ ಮೂಲಕ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿರುವ ಸಿಪಿಎಂ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಬೆಂಬಲಿಸಿ ರಾಜಕೀಯದಲ್ಲಿ ಬದಲಾವಣೆಗೆ ಮುಂದಾಗಿ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಕರೆ ನೀಡಿದ್ದಾರೆ. ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಿಪಿಎಂ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ರೆಡ್ಡಿ, ಸುಂದರ ಮಲೆಕುಡಿಯ ಅವರ ಕೈಕಡಿದಾಗ ಮತ್ತು ಹೆಣ್ಮಕ್ಕಳ ಮೇಲೆ ಅತ್ಯಾಚಾರ ಕೊಲೆ, ನಡೆದಾಗ ಇಲ್ಲಿನ ರಾಜಕೀಯ ನಾಯಕರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಜನವಿರೋಧಿ ನೀತಿಗಳಿಗೆ ಮುಂದಿನ ಚುನಾವಣೆಯಲ್ಲಿ ಜನ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ 2 ಜಿಪಂ ಹಾಗೂ 6 ತಾಪಂ ಕ್ಷೇತ್ರಗಳಲ್ಲಿ ಸಿಪಿಎಂ ಕ್ಷ ಸ್ಪರ್ಧಿಸಲಿದೆ. ಧರ್ಮಸ್ಥಳ ಜಿಪಂ ಕ್ಷೇತ್ರದಲ್ಲಿ ವಿಠಲ ಮಲೆಕುಡಿಯ, ಲಾಯಿಲ ಜಿಪಂ ಕ್ಷೇತ್ರದಲ್ಲಿ ರೋಹಿಣಿ ಅಭ್ಯರ್ಥಿಗಳಾಗಿದ್ದಾರೆ.
ಕೊಕ್ಕಡ ತಾಪಂ ಕ್ಷೇತ್ರದಲ್ಲಿ ಮುಹಮ್ಮದ್ ಅನಸ್, ಅರಸಿನಮಕ್ಕಿ ತಾಪಂ ಕ್ಷೇತ್ರದಲ್ಲಿ ಮಮತಾ, ಕಳೆಂಜ ಕ್ಷೇತ್ರದಲ್ಲಿ ದೇವಕಿ, ಧರ್ಮಸ್ಥಳ ಕ್ಷೇತ್ರದಲ್ಲಿ ವೇದಾವತಿ, ನೆರಿಯ ಕ್ಷೇತ್ರದಲ್ಲಿ ವಸಂತ ನಡ, ಮಿತ್ತಬಾಗಿಲು ಕ್ಷೇತ್ರದಲ್ಲಿ ಚನಿಯಪ್ಪಮಲೆಕುಡಿಯ ಅಭ್ಯರ್ಥಿಗಳಾಗಿದ್ದಾರೆ. ಎಲ್ಲ ಅಭ್ಯರ್ಥಿಗಳೂ ಫೆ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಪ್ರಕಟಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿದರು. ವೇದಿಕೆಯಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್, ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್, ಹರಿದಾಸ್, ತಾಲೂಕು ಮುಖಂಡರಾದ ವಸಂತ ನಡ, ದೇವಕಿ, ಶ್ಯಾಮರಾಜ್, ಶೇಖರ ಲಾಯಿಲ, ವಿಠಲ ಮಲೆಕುಡಿಯ ಮತ್ತಿತರರು ಉಪಸ್ಥಿತರಿದ್ದರು.







