ಸುಳ್ಯ: ಜಿಪಂ-ತಾಪಂ ಚುನಾವಣೆ; ಅಧಿಕಾರಿಗಳೊಂದಿಗೆ ಸಮಾಲೋಚನೆ

ಸುಳ್ಯ, ಫೆ.1: ಜಿಪಂ ಹಾಗೂ ತಾಪಂ ಕ್ಷೇತ್ರಗಳ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಚುನಾವಣಾಧಿಕಾರಿ ಅರುಣ ಪ್ರಭಾರ ಅಧ್ಯಕ್ಷತೆಯಲ್ಲಿ ಭದ್ರತಾ ವ್ಯವಸ್ಥೆಗಳ ಕುರಿತು ಅಧಿಕಾರಿಗಳ ಸಭೆ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆಯಿತು.
ಚುನಾವಣಾ ಆಯೋಗದಿಂದ ಸೂಕ್ಷ್ಮ ಮತಗಟ್ಟೆಗಳಿಗೆ ಗುರಿ ನಿಗದಿ ಮಾಡಿ ಸುತ್ತೋಲೆ ಬಂದಿದ್ದು, ಸುಳ್ಯ ತಾಲೂಕಿಗೆ 28 ಗುರಿ ನಿಗದಿ ಮಾಡಲಾಗಿದೆ ಎಂದು ಅರುಣಾ ಪ್ರಭ ತಿಳಿಸಿದರು.
ಕಳೆದ ಚುನಾವಣೆಯ ಸಂದರ್ಭ ತಾಲೂಕಿನಲ್ಲಿ 5 ನಕ್ಸಲ್ ಬಾಧಿತ ಮತಗಟ್ಟೆ, 45 ಸೂಕ್ಷ್ಮ ಮತ್ತು 25 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದವು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಸತೀಶ್ ಹೇಳಿದರು. ಗ್ರಾಮ ಪಂಚಾಯತ್‌ಗಳಲ್ಲಿರುವ ವೆಬ್‌ಕ್ಯಾಂ ಹಾಗೂ ಲ್ಯಾಪ್‌ಟಾಪ್‌ಗಳನ್ನು ಉಪಯೋಗಿಸಿ ವೆಬ್‌ಕಾಸ್ಟ್ ಮಾಡುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು. ತಹಶೀಲ್ದಾರ್ ಅನಂತ ಶಂಕರ, ತಾಪಂ ಇಒ ಮಧುಕುಮಾರ್, ಬಿಇಒ ಬಿ.ಎಸ್.ಕೆಂಪಲಿಂಗಪ್ಪ, ಉಪ ತಹಶೀಲ್ದಾರ್ ಲಿಂಗಪ್ಪನಾಯ್ಕ, ಕಂದಾಯ ನಿರೀಕ್ಷಕ ದೀಪಕ್, ಗ್ರಾಮಕರಣಿಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳ ನೇಮಕ: ತಾಪಂ ಮತ್ತು ಜಿಪಂ ಚುನಾವಣೆಯ ಯಶಸ್ವಿ ನಿರ್ವಹಣೆಗಾಗಿ ಹಲವು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಚುನಾವಣಾ ಅಧಿಸೂಚನೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಳ್ಯ ತಾಲೂಕಿನ 4 ಜಿಪಂ ಕ್ಷೇತ್ರಗಳಿಗೆ ಮಂಗಳೂರು ಮಹಾನಗರಪಾಲಿಕೆ ವಲಯ ಆಯುಕ್ತ ಅರುಣ ಪ್ರಭಾ ಚುನಾವಣಾಧಿಕಾರಿಯಾಗಿದ್ದು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ. ಇವರಿಬ್ಬರೂ ಮಿನಿ ವಿಧಾನಸೌಧದಲ್ಲಿ ಕರ್ತವ್ಯ ಆರಂಭಿಸಿದ್ದಾರೆ. ತಾಪಂ ಕ್ಷೇತ್ರಗಳಿಗೆ ಸುಳ್ಯ ತಹಶೀಲ್ದಾರ್ ಅನಂತ ಶಂಕರ್ ಚುನಾವಣಾಧಿಕಾರಿಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.
ತಾಪಂ ಕ್ಷೇತ್ರಗಳಿಗೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಜ್ಜಾವರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ಮಹೇಶ್, ಗುತ್ತಿಗಾರು ಮತ್ತು ಮಡಪ್ಪಾಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಂ.ಶಿವಕುಮಾರ್‌ಬೆಳ್ಳಾರೆ ಮತ್ತು ಬಾಳಿಲಕ್ಕೆ ಸಹಾಯಕ ಕೃಷಿ ಅಧಿಕಾರಿ ದಾಮೋದರ ಪಿ., ಸುಬ್ರಹ್ಮಣ್ಯ ಮತ್ತು ಗುತ್ತಿಗಾರಿಗೆ ವಲಯ ಅರಣ್ಯಾಧಿಕಾರಿ ಮಂಜುನಾಥ್, ಜಾಲ್ಸೂರು ಹಾಗೂ ಐವರ್ನಾಡಿಗೆ ಕೆಎಫ್‌ಡಿಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಆಚಾರಿ, ಐವರ್ನಾಡು, ಮಡಪ್ಪಾಡಿ, ನೆಲ್ಲೂರು ಕೆಮ್ರಾಜೆಗೆ ಕೆಎಫ್‌ಡಿಸಿ ರಬ್ಬರ್ ವಿಭಾಗದ ಅಧೀಕ್ಷಕ ಎ. ರಮೇಶ್, ಪಂಜ ಹಾಗೂ ಸುಬ್ರಹ್ಮಣ್ಯಕ್ಕೆ ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಅರಂತೋಡಿಗೆ ಕೆಎಫ್ ಡಿಸಿ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಮುಹಮ್ಮದ್ ಜಾವೇದ್, ಎಣ್ಮೂರು, ಪಂಜ, ಬಾಳಿಲಕ್ಕೆ ಸಹಾಯಕ ಯುವಜನ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಬೆಳ್ಳಾರೆ, ಐವರ್ನಾಡಿಗೆ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕುಮಾರ್, ಆಲೆಟ್ಟಿಗೆ ಸುಳ್ಯ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಸೆಕ್ಟರ್ ಅಧಿಕಾರಿಗಳಾಗಿ ನೇಮಕಗೊಂಡಿದ್ದು, ಇವರಿಗೆ ನಿರ್ದಿಷ್ಟ ಮತಗಟ್ಟೆಗಳನ್ನು ಹಂಚಲಾಗಿದೆ.
ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಖರ್ಚು ವೆಚ್ಚಗಳ ನೋಡೆಲ್ ಅಧಿಕಾರಿಯಾಗಿದ್ದಾರೆ.







