ಬೆಳ್ತಂಗಡಿ: 2,00,668 ಮತದಾರರು
49 ಸೂಕ್ಷ್ಮ, 72 ಅತಿಸೂಕ್ಷ್ಮ ಸಹಿತ 231 ಮತದಾನ ಕೇಂದ್ರಗಳು
ಬೆಳ್ತಂಗಡಿ, ಫೆ.1: ಜಿಪಂ ಹಾಗೂ ತಾಪಂಗೆ ಫೆ.20ರಂದು ನಡೆಯಲಿರುವ ಚುನಾವಣೆಯಲ್ಲಿ ತಾಲೂಕಿನಲ್ಲಿ 2,00,668 ಮತದಾರರಿದ್ದಾರೆ. ಈ ಪೈಕಿ 1,01,066 ಪುರುಷ ಹಾಗೂ 99,602 ಮಹಿಳಾ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ರಾಜು ಮೊಗವೀರ ಸೋಮವಾರ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಮಪತ್ರವನ್ನು ಫೆ.1ರಿಂದ 8ರವರೆಗೆ ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಸಲ್ಲಿಸಬಹುದು. ಫೆ.9ರಂದು ನಾಮಪತ್ರ ಪರಿಶೀಲನೆ, ಫೆ.11ರಂದು ನಾಮಪತ್ರ ಹಿಂದೆಗೆತಕ್ಕೆ ಕೊನೆಯ ದಿನ. ಫೆ.20ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ಮತದಾನ ನಡೆಯಲಿದೆ. ಫೆ.23ರಂದು ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ತಾಲೂಕಿನಲ್ಲಿ 231 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 49 ಸೂಕ್ಷ್ಮ, 72 ಅತಿಸೂಕ್ಷ್ಮ, 110 ಸಾಮಾನ್ಯ ಮತದಾನ ಕೇಂದ್ರಗಳಿವೆ. ಮತಗಟ್ಟೆಗಳ ಮೇಲುಸ್ತುವಾರಿಗೆ ಓರ್ವ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. 26 ಮಂದಿ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ತಾಲೂಕಿನಲ್ಲಿ 7 ಜಿಪಂ ಹಾಗೂ 26 ತಾಪಂ ಕ್ಷೇತ್ರಗಳಿದೆ. ಜಿಪಂನ ನಾರಾವಿ, ಅಳದಂಗಡಿ, ಕುವೆಟ್ಟು, ಕಣಿಯೂರು, ಲಾಲ, ಉಜಿರೆ ಹಾಗೂ ಧರ್ಮಸ್ಥಳ ಕ್ಷೇತ್ರಗಳಿಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಸಬಹುದು.
ತಾಪಂನ ನಾರಾವಿ, ವೇಣೂರು, ಹೊಸಂಗಡಿ, ಅಳದಂಗಡಿ, ಅಂಡಿಂಜೆ, ಶಿರ್ಲಾಲು, ಪಡಂಗಡಿ, ಲಾಲ, ನಡ, ಮಿತ್ತಬಾಗಿಲು ಕ್ಷೇತ್ರಗಳಿಗೆ ತಹಶೀಲ್ದಾರ್ ಕಚೇರಿಯಲ್ಲಿ, ಉಜಿರೆ, ಮುಂಡಾಜೆ, ಚಾರ್ಮಾಡಿ, ನೆರಿಯ, ಧರ್ಮಸ್ಥಳ, ಕೊಕ್ಕಡ, ಕಳೆಂಜ, ಅರಸಿನಮಕ್ಕಿ ಕ್ಷೇತ್ರಗಳಿಗೆ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ, ಉರುವಾಲು, ಇಳಂತಿಲ, ತಣ್ಣೀರುಪಂತ, ಬಾರ್ಯ, ಮಾಲಾಡಿ, ಮಡಂತ್ಯಾರು, ಕುವೆಟ್ಟು, ಕಳಿಯ ಕ್ಷೇತ್ರಗಳಿಗೆ ತಾಪಂ ಕಚೇರಿಯ ಸಾಮರ್ಥ್ಯ ಸೌಧದಲ್ಲಿ ನಾಮಪತ್ರ ಸಲ್ಲಿಸಬಹುದು ಎಂದು ರಾಜು ಮೊಗವೀರ ತಿಳಿಸಿದರು.
ಯಾವುದೇ ಸಭೆ ಸಮಾರಂಭಗಳನ್ನು ನಡೆಸುವ ರಾಜಕೀಯ ಪಕ್ಷಗಳು ತಾಲೂಕು ಕಚೇರಿಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಧಾರ್ಮಿಕ ಹಾಗೂ ಇತರೆ ಸಭೆ ಸಮಾರಂಭಗಳಿಗೂ ಅನುಮತಿಯನ್ನು ಪಡೆಯಬೇಕು ಎಂದ ಅವರು, ಚುನಾವಣಾ ಸಿಬ್ಬಂದಿಗೆ ಫೆ.13ರಂದು ತರಬೇತಿಯನ್ನು ಏರ್ಪಡಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಲಾಗುವುದು ಎಂದರು. ಸುದ್ದಿಗೋಷ್ಥಿಯಲ್ಲಿ ತಹಶೀಲ್ದಾರ್ ಪ್ರಸನ್ನಮೂರ್ತಿ, ಉಪ ತಹಶೀಲ್ದಾರ್ ಚೆನ್ನಪ್ಪಗೌಡ, ಉಪ ಚುನಾವಣಾಧಿಕಾರಿಗಳಾದ ಮೋಹನ್ ಕುಮಾರ್ ಮತ್ತು ಗಣೇಶ್ ಪೂಜಾರಿ ಉಪಸ್ಥಿತರಿದ್ದರು.







