ಕಾಶ್ಮೀರ ಪಂಡಿತರೊಬ್ಬರಿಗೆ ಮುಸ್ಲಿಮರಿಂದ ಅಂತಿಮ ಸಂಸ್ಕಾರ!

ಹೃದಯಸ್ಪರ್ಶಿ ವಿದಾಯ ಕೋರಿದ ಮವ್ಲಾನ್ ನಾಗರಿಕರು.
ಶ್ರೀನಗರ: ಹೃದಯಸ್ಪರ್ಶಿ ಕಾಶ್ಮೀರಿಯತೆಗೆ ಉದಾಹರಣೆಯೆಂಬಂತೆ ದಕ್ಷಿಣ ಕಾಶ್ಮೀರದ ಕುಲ್‌ಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಒಬ್ಬ ಕಾಶ್ಮೀರಿ ಪಂಡಿತರ ಅಂತಿಮ ಸಂಸ್ಕಾರ ಕಾರ್ಯವನ್ನು ಮುಸ್ಲಿಮರು ನೆರವೇರಿಸಿದ್ದಾರೆ. ಭಯೋತ್ಪಾದಕರ ನೆಪ ಮುಂದಿಟ್ಟು ತಮ್ಮ ಕುಟುಂಬ ಅವರಲ್ಲಿ ಗ್ರಾಮವನ್ನು ತೊರೆಯಲು ಹೇಳಿದ್ದಾಗಲೂ ಈ ಕಾಶ್ಮೀರಿ ಪಂಡಿತರಾದ ಜಾನಕಿನಾಥ್(85) ಗ್ರಾಮ ತೊರೆಯಲು ನಿರಾಕರಿಸಿದ್ದರು. ಆದ್ದರಿಂದ ಕುಟುಂಬದವರು ಅವರನ್ನು ಈ ಗ್ರಾಮದಲ್ಲಿಯೇ ಬಿಟ್ಟು ಬೇರೆಡೆಗೆ ಹೊರಟು ಹೋಗಿದ್ದರು.
ಜಾನಕಿನಾಥ್ ಈಗ ತನ್ನೂರಾದ ಕುಲ್‌ನಾಗ್ ಜಿಲ್ಲೆಯ ಮಾವ್ಲಾನ್‌ನಲ್ಲಿ ಕಳೆದ ಶನಿವಾರ ತೀರಿಹೋಗಿದ್ದಾರೆ. ಅವರ ಕುಟುಂಬಿಕರಾಗಲಿ ಕಾಶ್ಮೀರಿ ಪಂಡಿತರಾಗಲಿ ಅವರು ಮೃತರಾಗುವ ವೇಳೆ ಅಲ್ಲಿರಲಿಲ್ಲ. ಅಷ್ಟೇಕೆ ಆ ಊರಲ್ಲೇ ಇರಲಿಲ್ಲ. ಆದುದರಿಂದ ಅಲ್ಲಿದ್ದ ಸ್ಥಳೀಯ ಮುಸ್ಲಿಮರು ಮುಂದೆ ನಿಂತು ಮೃತರ ಶವಸಂಸ್ಕಾರವನ್ನು ನೆರವೇರಿಸಿದ್ದಾರೆ ಮತ್ತು ಅವರು ತಮ್ಮವರಲ್ಲಿ ಒಬ್ಬರನ್ನುಕಳಕೊಂಡಿರುವಂತೆ ದುಃಖಿಸಿದ್ದಾರೆ. ಮಾವ್ಲಾನ್‌ನಲ್ಲಿ ಸುಮಾರು 5000 ಮುಸ್ಲಿಮ್ ಜನಸಂಖ್ಯೆಯಿದೆ. ಇಲ್ಲಿ ಕೇವಲ ಜಾನಕಿನಾಥ್ ಒಬ್ಬರೇ ಪಂಡಿತ ಸಮುದಾಯದವರಿದ್ದರು. ಅದಕ್ಕೆ ಕಾರಣವೇನೆಂದರೆ ಅವರು 1990ರಲ್ಲಿ ಇಲ್ಲಿಯೇ ವಾಸಿಸುವೆ ಎಂದು ದೃಢವಾಗಿ ನಿರ್ಣಯ ಮಾಡಿದ್ದರು. ಆ ಸಮಯದಲ್ಲಿ ಕಾಶ್ಮೀರಿ ಪಂಡಿತರು ಕಾಶ್ಮೀರ ಘಾಟಿಯನ್ನು ತೊರೆದು ಪಲಾಯನ ಮಾಡುತ್ತಿದ್ದರು. ಅವರು ಸರಕಾರಿ ಸೇವೆಯಲ್ಲಿದ್ದು 1990ರಲ್ಲಿ ನಿವೃತ್ತಿಯಾಗಿದ್ದರು. ಅಂದು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದನೆ ತಲೆ ಎತ್ತುತ್ತಿದ್ದ ಸಂದರ್ಭವಾಗಿತ್ತು. ಜಾನಕಿ ನಾಥ್ ಕಳೆದ ಐದು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಈ ಸಂದರ್ಭದಲ್ಲಿ ನೆರೆಯ ಮುಸ್ಲಿಮರು ಅವರನ್ನು ಉಪಚರಿಸುತ್ತ ಬಂದಿದ್ದಾರೆ. ಮೃತರಾದ ಸುದ್ದಿ ತಿಳಿದಂತೆ ಸ್ಥಳೀಯ ಮುಸ್ಲಿಮರು ಶೋಕವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳೀಯರಾದ ಗುಲ್‌ಮುಹಮ್ಮದ್ ಅಲಿ ಹೇಳುತ್ತಾರೆ," ನಮ್ಮವರೊಬ್ಬರನ್ನು ಕಳೆದುಕೊಂಡಿದ್ದೇವೆ ಎಂಬ ಅನುಭವವಾಗುತ್ತಿದೆ. ಅವರು ಖಂಡಿತ ನಮಗೆ ದೊಡ್ಡಣ್ಣನಂತಿದ್ದರು. ನಾವು ಯಾವುದೇ ಹೆಜ್ಜೆ ಮುಂದಿಡುವ ಮೊದಲು ಅವರ ಸಲಹೆಯನ್ನು ಪಡೆಯುತ್ತಿದ್ದೆವು". ಸ್ಥಳೀಯರಾದ ಗುಲಾಮ್ ಹಸನ್ ಎಂಬವರು ಹೇಳುತ್ತಾರೆ" ಧರ್ಮವನ್ನು ಪರಿಗಣಿಸದೆ ನೆರೆಕರೆಯವರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ. ಇದನ್ನು ನಾವು ಪೂರ್ತಿಗೊಳಿಸಿದ್ದೇವೆ. ನಾವು ಒಬ್ಬ ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮೊಂದಿಗಿದ್ದರು.ಹೌದು, ಕೆಟ್ಟದಿನಗಳಲ್ಲಿ ಮತ್ತು ಉತ್ತಮ ದಿನಗಳಲ್ಲಿ ಅವರು ನಮ್ಮ ಜೊತೆಗೇ ಇದ್ದರು" ಅಂತಿಮವಾಗಿ ಅವರ ಮೃತದೇಹದ ಸಂಸ್ಕಾರಕ್ಕಾಗಿ ನೆರೆಕರೆಯವರು ಕಟ್ಟಿಗೆ ಒಟ್ಟುಮಾಡಿ ಚಿತೆಯ ವ್ಯವಸ್ಥೆ ಮಾಡಿದರು. ಜಾನಕಿನಾಥ್‌ರಿಗೆ ಕಾಶ್ಮೀರವನ್ನು ಬಿಟ್ಟು ಹೋಗಿಲ್ಲ ಎಂಬ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.







