ನೇತ್ರಾವತಿ ರಕ್ಷಣೆಗಾಗಿ ‘ನೋಟಾ ಅಭಿಯಾನ’!
ಮಂಗಳೂರು : ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಹ್ಯಾದ್ರಿ ಸಂಚಯ ಇದೀಗ ಚುನಾವಣೆಯಲ್ಲಿ ನೋಟಾ ಅಭಿಯಾನದ ಮೂಲಕ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಂಚಾಲಕ ದಿನೇಶ್ ಹೊಳ್ಳ, ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಯೋಜನೆಯನ್ನು ಬೆಂಬಲಿಸುವ ಪಕ್ಷಗಳಿಗೆ ಮತ ನೀಡದೆ ನೋಟಾ ಚಲಾಯಿಸುವ ಮೂಲಕ ಯೋಜನೆ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸುವಂತೆ ಸಂಚಯದ ಮೂಲಕ ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ ಮತ್ತು ಅರ್ಥಹೀನ. ಯೋಜನೆಯ ವಿರುದ್ಧ ಹೋರಾಟ ಪ್ರತಿಭಟನೆಗಳನ್ನು ಲೆಕ್ಕಿಸದೇ ರಾಜ್ಯ ಸರಕಾರ ಕರಾವಳಿ ಜನತೆಯ ಮೇಲೆ ದಬ್ಬಾಳಿಕೆ ಪ್ರದರ್ಶಿಸುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಾಹ್ಯವಾಗಿ ಪರಸ್ಪರ ದೋಷಾರೋಪ ಮಾಡುತ್ತಾ ಯೋಜನೆಯ ಪರವಾಗಿದ್ದುಕೊಂಡು ಜನರಿಗೆ ಮೋಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಜೀವನದಿ ಮತ್ತು ಜೀವನಾಡಿಯಾಗಿರುವ ನೇತ್ರಾವತಿ ನದಿಯ ಸಂರಕ್ಷಣೆಗಾಗಿ ಸಂಚಯವು ನೋಟಾ ಅಭಿಯಾನ ನಡೆಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಸಹ್ಯಾದ್ರಿ ಸಂಚಯ ನೋಟಾ ಅಭಿಯಾನ ನಡೆಸಿತ್ತು. ಆಸಂದರ್ಭ ನೇತ್ರಾವತಿ ನದಿ ಬಗೆಗಿನ ಜನರ ಹೋರಾಟದ ಕಾವು ಅಷ್ಠಾಗಿ ಇಲ್ಲದಿದ್ದರೂ 7800ರಷ್ಟು ನೋಟಾ ಮತಗಳು ಚಲಾವಣೆಯಾಗಿತ್ತು. ಈ ಬಾರಿ ಹೋರಾಟದ ಕಾವು ಹೆಚ್ಚಾಗಿರುವುದರಿಂದ 70,000ಕ್ಕೂ ಅಧಿಕ ನೋಟಾ ಚಲಾವಣೆಯ ನಿರೀಕ್ಷೆ ಇದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಎತ್ತಿನಹೊಳೆ ಯೋಜನೆಯನ್ನು ಕೈಬಿಡದಿದ್ದರೆ ಮುಂದಿನ ವಿಧಾನಸಭಾ ಚುನಾಣೆಯಲ್ಲಿ ಸಂಚಯದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ನಮಗಿಲ್ಲ. ಆದರೆ, ನಮ್ಮ ಜಲ, ನೆಲಕ್ಕೆ ಆಗುವ ಅಪಾಯದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ನೋಟಾ ಅಭಿಯಾನ ನಾವು ಕೈಗೊಂಡಿದ್ದೇವೆ. ಬೀದಿಗಿಳಿದು ಹೋರಾಟಕ್ಕೆ ಜಿಲ್ಲೆಯ ಜನರು ಬಹುತೇಕವಾಗಿ ಹಿಂದೇಟು ಹಾಕುತ್ತಿದ್ದರೂ ಈ ಅಭಿಯಾನದ ಮೂಲಕ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲಿದ್ದಾರೆ ಎಂದು ಶಶಿಧರ ಶೆಟ್ಟಿ ತಿಳಿಸಿದರು.
ಗೋಷ್ಠಿಯಲ್ಲಿ ನಾರಾಯಣ ಬಂಗೇರ, ಕಟೀಲು ದಿನೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.







